Sunday, April 12, 2009

ಮಾತಿಗೊಮ್ಮೆ 'ಇಂಡಿಯಾ,ಇಂಡಿಯನ್ಸ್' ಅನ್ನುವ ಮೊದಲು


ಕೆಲವರಿರುತ್ತಾರೆ,ಅವರ ಕೈಯಲ್ಲಿ ಮಾಡಲಾಗದ ಕೆಲಸಕ್ಕೆಲ್ಲ ದೇಶವನ್ನೇ ಬೈಯ್ಯುವವರು, ನನ್ನ ಒಬ್ಬ ಗೆಳೆಯ ಇದ್ದಾನೆ, ಅವನಿಗೆ ಹೇಳಿದ ಟೈಮ್ಗೆ ಬರೋ ಅಭ್ಯಾಸನೆ ಇಲ್ಲ, ಕೇಳಿದ್ರೆ
"ನೋಡಮ್ಮ ,ನಾವ್ ಎಷ್ಟೇ ಆದ್ರೂ 'ಇಂಡಿಯನ್ಸ್' ನಾವ್ ಹಿಂಗೆ ಬರೋದು ಅಂತಾನೆ'.

ಮೊನ್ನೆ ಊಟಕ್ಕೆ ಅಂತ ನಮ್ಮ ಆಫಿಸ್ ಅತ್ರ ಇರೋ 'ನಿಸರ್ಗ' ಅನ್ನೋ ಹೋಟೆಲ್ಗೆ ಹೋದಾಗ, ನಾ ಕುಳಿತಿದ್ದ ಟೇಬಲ್ನಲ್ಲೆ ಇಬ್ಬರು ಮಹಾಶಯರು ಕುಳಿತಿದ್ದರು. ಅವರಲ್ಲೊಬ್ಬ ತನ್ನ ಕುಂಬಳಕಾಯಿಯಂತ ಹೊಟ್ಟೆಯ ಮೇಲೆ ಕೈಯಾಡಿಸುತ್ತಾ ಹೇಳಿದ,

'ನೀನ್ ಏನೇ ಹೇಳಮ್ಮ ನಮ್ಮ್ ದೇಶದಲ್ಲಿ ಶಾಲೆಯಲ್ಲಿ ಹೆಲ್ತ್ ಬಗ್ಗೆ ಓದಿಸೋದೆ ಇಲ್ಲ ನೋಡು',
ಅದಕ್ಕೆ ಮತ್ತೊಬ್ಬ 'ಹ್ಞೂ ಕಣೋ, ನಮ್ ದೇಶದಲ್ಲಿ ಮಾತ್ರ ಹಿಂಗೆ, ಬೇರೆ ದೇಶದಲ್ಲೆಲ್ಲ ಮಿಲಿಟರಿ ಟ್ರೈನಿಂಗ್ ಕಡ್ಡಾಯ ಮಾಡಿರ್ತಾರೆ, ಹಾಗಾದ್ರೂ ಇದ್ದಿದ್ರೆ ಹೆಂಗೋ ಒಳ್ಳೆ ಬಾಡಿ ಮೈನ್ಟೈನ್ ಮಾಡಬಹುದಿತ್ತು, ಅಲ್ವಾ?'
'ಹೌದು ಗುರು, ಎಷ್ಟಾದ್ರೂ ಇದು ಇಂಡಿಯಾ ಬಿಡು, ಇಲ್ಲಿ ಹಂಗೆಲ್ಲ ಆಗೋಲ್ಲ' ... ಹೀಗೆ ಮುಂದುವರೆದಿತ್ತು ಅವರ ಹರಟೆ.

ಅಲ್ಲ ಸ್ವಾಮೀ, ಆ ಪುಣ್ಯಾತ್ಮನಿಗೆ ಸರಿಯಾದ ಸಮಯಕ್ಕೆ ಬರಲಾಗುವುದಿಲ್ಲವಾದರೆ ಅದನ್ನು ದೇಶದ ಮೇಲೆ ಹೇಳುತ್ತಾನೆ, ಮತ್ತೊಬ್ಬ ಪುಣ್ಯಾತ್ಮ ಫಿಜ್ಜ,ಬರ್ಗರ್ ತಿಂದು ಕೊಬ್ಬು ಬೆಳೆಸಿಕೊಂಡು ಅದನ್ನು ದೇಶದ ತಲೆಗೆ ಕಟ್ಟುತ್ತಾನೆ!! ದೇಶವನ್ನು ಬೈಯ್ಯುವುದು ನಮಗೆ ಕಡ್ಲೆ ಪುರಿ ತಿಂದಷ್ಟೇ ಸುಲಭವಾಗಿ ಬಿಟ್ಟಿದೆ.

ನಾವ್ಯಾಕೆ ಹೀಗೆ ನಮ್ಮ ದೇಶದ ಬಗ್ಗೆಯೇ ನೆಗೆಟೀವ್ ಆಗಿ ಮಾತಾಡ್ತೀವಿ? ನಮಗೆ ಯಾಕೆ ದೇಶದ ಮೇಲೆ ಈ ಪರಿ ಸಿಟ್ಟು? ದೇಶದ ಮೇಲೆ ಇಷ್ಟೆಲ್ಲಾ ಮಾತಾಡುವ ಮೊದಲು,ನಾವೆಷ್ಟು ಸರಿಯಿದ್ದೇವೆ ಅಂತ ನಾವ್ಯಾಕೆ ಕೇಳಿಕೊಳ್ಳುವುದಿಲ್ಲ? ಈ ದೇಶ ಉದ್ದಾರ ಆಗೋಲ್ಲ, ಬದಲಾಗೊಲ್ಲ ಅನ್ನುವುದಕಿಂತ ಮೊದಲು, ನಾವು ಬದಲಾಗಬೇಕು, ನಾವು ಯೋಚಿಸುವ ರೀತಿ ಬದಲಾಗಬೇಕು, ಈ ದೇಶವನ್ನು ಮುನ್ನಡೆಸುತ್ತಿರುವ ನಾಯಕರು ಹಾಗು ಅವರ ಮನಸ್ತಿತಿ ಬದಲಾಗಬೇಕು.

ಇನ್ನೊಮ್ಮೆ 'ಇಂಡಿಯಾ,ಇಂಡಿಯನ್ಸ್' ಅನ್ನುವ ಮೊದಲು , ನಾವೆಷ್ಟು ಸರಿಯಿದ್ದೇವೆ ಅಂದು ಕೇಳಿಕೊಳ್ಳೋಣವೇ?

(ಚಿತ್ರ ಕೃಪೆ :http://www.goodcommitment.tv)

ರಾಕೇಶ್ ಶೆಟ್ಟಿ Smiling

ಭಾರತ - ಪಾಕಿಸ್ತಾನದ ಮಧ್ಯೆ ಅಣ್ವಸ್ತ್ರ ಸಮರ ನಡೆದರೆ?

ಹೌದು ನಡೆದರೆ ಏನಾಗುತ್ತೆ? ಅಂತ ವಿಡಂಬನಾತ್ಮಕವಾಗಿ ವಿವರಿಸುವ ಮಿಂಚೆಯೊಂದು ಬಂದಿತ್ತು,

'ಶೀತಲ ಸಮರ'ದ ಸಮಯದಲ್ಲಿ ಅಮೆರಿಕಾವೆನಾದ್ರು ರಷ್ಯಾದ ಮೇಲೆ ಅಣ್ವಸ್ತ್ರ ಸಿಡಿತಲೆ ಪ್ರಯೋಗಿಸಿದ್ದರೆ, ರಷ್ಯಾಕ್ಕೆ ಅದು ೩ ಸೆಕೆಂಡ್ಗಳಲ್ಲಿ ತಿಳಿಯುತ್ತಿತ್ತು ಮತ್ತು ಅದಕ್ಕೆ ಪ್ರತಿ ಅಸ್ತ್ರ ಪ್ರಯೋಗಿಸಲು ಕೇವಲ ೪೫ ಸೆಕೆಂಡ್ಗಳು ಸಾಕಿತ್ತು.

ಮುಂಬೈ ಮಾರಣ ಹೋಮದ ನಂತರ ಭಾರತ - ಪಾಕಿಸ್ತಾನದ ನಡುವೆ ಯುದ್ದ ಭೀತಿ ಶುರುವಾಗಿದೆಯಲ್ಲ (!), ಯುದ್ಧ ನಡೆದರೆ ಹೀಗಾಗಬಹುದು!!

ಪಾಕಿ ಸೈನ್ಯ ಭಾರತದ ಮೇಲೆ ಅಣ್ವಸ್ತ್ರ ಪ್ರಯೋಗಿಸಲು ತೀರ್ಮಾನಿಸುತ್ತದೆ, ಹಾಗೂ ಪ್ರಯೋಗಿಸಿಯೂ ಬಿಡುತ್ತದೆ.(ನೆನಪಿರಲಿ, ಹಾಗೆ ಮಾಡಲು ಅದಕ್ಕೆ ಸರ್ಕಾರದ ಆಜ್ಞೆಗೆ ಕಾಯುವ ಅಗತ್ಯ ಇಲ್ಲ)

ಭಾರತದ ಟೆಕ್ನಾಲಜಿ ಚೆನ್ನಾಗಿರುವುದರಿಂದ ಕೇವಲ ೮ ಸೆಕೆಂಡ್ ಗಳಲ್ಲೇ ಅದಕ್ಕೆ ವಿಷಯ ತಿಳಿದು ಹೋಗುತ್ತದೆ, ಪ್ರತಿ ಅಸ್ತ್ರ ಪ್ರಯೋಗಿಸಲು ಭಾರತಿಯ ಸೈನ್ಯ ನಿರ್ಧಾರ ಮಾಡುತ್ತದೆ.ಆದರೆ ಅವರಿಗೆ ಹಾಗೆ ಮಾಡಲು ಸರ್ಕಾರದ ಆಜ್ಞೆ ಬೇಕಲ್ಲಾ!!

ಸೈನ್ಯವು 'ರಾಷ್ಟ್ರಪತಿ'ಯವರಿಗೆ ಈ ಬಗ್ಗೆ ಪತ್ರವೊಂದನ್ನು ಕಳಿಸುತ್ತದೆ, ಅವರು ಅದನ್ನು 'ಕ್ಯಾಬಿನೆಟ್'ನ ಮುಂದಿಡುತ್ತಾರೆ.ಪ್ರಧಾನಿ ತುರ್ತು ಲೋಕ ಸಭೆ ಅಧಿವೇಶನ ಕರೆಯುತ್ತಾರೆ. ಆದರೆ ಗೊತ್ತಲ್ಲ, ನಮ್ಮ ರಾಜಕೀಯ ನಾಯಕರು 'ಸಭಾತ್ಯಾಗ' ಹಾಗೂ 'ಗದ್ದಲವೆಬ್ಬಿಸುತ್ತಾರೆ'. ಲೋಕ ಸಭೆಯ ಅಧಿವೇಶನ ಅನಿರ್ದಿಷ್ಟ ಅವಧಿಗೆ ಮುಂದೂಡಲ್ಪಡುತ್ತದೆ.
ರಾಷ್ಟ್ರಪತಿಯವರು ತುರ್ತು ನಿರ್ಣಯ ಕೈಗೊಳ್ಳುವಂತೆ ಆದೇಶಿಸುತ್ತಾರೆ.

ಅತ್ತ ಪಾಕಿಗಳು ಹಾರಿಸಿದ ಮಿಸೈಲ್ ತಾಂತ್ರಿಕ ಕಾರಣದಿಂದ ಫೇಲ್ ಆಗಿ ಅವರು ಮತ್ತೊಮ್ಮೆ ಹಾರಿಸುವ ಯತ್ನದಲ್ಲಿರುತ್ತಾರೆ.

ಇತ್ತ ಭಾರತದಲ್ಲಿ ಕೇಂದ್ರ ಸರ್ಕಾರಕ್ಕೆ ಬಾಹ್ಯ ಬೆಂಬಲ ಕೊಟ್ಟಿದ್ದ ಪಕ್ಷವೊಂದು ಬೆಂಬಲ ಹಿಂತೆಗೆದುಕೊಂಡು ಸರ್ಕಾರ ಬಿದ್ದು ಹಂಗಾಮಿ ಸರ್ಕಾರವೊಂದು ನಿರ್ಮಾಣವಾಗುತ್ತದೆ.ಹಂಗಾಮಿ ಪ್ರಧಾನಿಯವರು ಅಣ್ವಸ್ತ್ರ ಪ್ರಯೋಗಿಸಲು ಭದ್ರತಾ ಪಡೆಗಳಿಗೆ ಅನುಮತಿ ನೀಡುತ್ತಾರೆ.ಆದರೆ ಎಲೆಕ್ಷನ್ ಕಮಿಷನ್ ಹಂಗಾಮಿ ಸರ್ಕಾರ ಚುನಾವಣ ನೀತಿ ಸಂಹಿತೆಯ ಉಲ್ಲಂಘನೆ ಮಾಡಿದೆ ಎಂದು ಸರ್ವೋಚ್ಹ ನ್ಯಾಯಾಲಯದ ಮೆಟ್ಟಿಲೇರುತ್ತದೆ. ನ್ಯಾಯಾಲಯ ಸರ್ಕಾರದ ಪರ ತೀರ್ಪು ನೀಡುತ್ತದೆ.

ಅಷ್ಟರಲ್ಲಿ ಪಾಕಿಗಳು ಒಂದು ಮಿಸೈಲ್ ಹಾರಿಸಿಯೇ ಬಿಡುತ್ತಾರೆ, ಆದರೆ ಅದು ಇಸ್ಲಾಮಾಬಾದ್ನಲ್ಲೆ ಸರ್ಕಾರಿ ಕಟ್ಟಡದ ಮೇಲೆ ಬೀಳುತ್ತದೆ Eye-wink

ಆದರೆ ಹಠ ಬಿಡದ ಪಾಕಿಗಳು ಮತ್ತೆ ಮತ್ತೆ ಪ್ರಯತ್ನಿಸಿ ವಿಫಲರಾಗಿ ಈ ಬಾರಿ 'Made in China' ಮಿಸೈಲ್ನ ಹಣೆ ಬರಹವೇ ಇಷ್ಟು ಎಂದು, ಅದನ್ನು ಬಿಟ್ಟು 'Made in USA' ಮಿಸೈಲ್ ಬಳಸಲು ತೀರ್ಮಾನಿಸುತ್ತಾರೆ.

ಇತ್ತ ಭಾರತದ ಸೇನೆ ಸರ್ಕಾರದ ಆಜ್ಞೆಗೆ ಕಾದ ೩ ತಿಂಗಳ ಬಳಿಕ, ಸರ್ಕಾರದ ಆದೇಶದ ಮೇರೆಗೆ ಸ್ವ-ನಿರ್ಮಿತ ಮಿಸೈಲ್ ಅನ್ನು ಹಾರಿಸಲು ನಿರ್ಧರಿಸುತ್ತದೆ. ಅಷ್ಟರಲ್ಲಿ ದೇಶಾದ್ಯಂತ ಅಣ್ವಸ್ತ್ರ ಪ್ರಯೋಗದ ವಿರುದ್ದ ಪ್ರತಿಭಟನೆ ನಡೆಯುತ್ತದೆ.

ಈ ನಡುವೆ ಪಾಕಿಗಳು 'ಕಳ್ಳ ಸಾಗಣೆ'ಯಲ್ಲಿ ತಂದ 'Made in USA' ಮಿಸೈಲ್ ಅನ್ನು ಪ್ರಯೋಗಿಸಲು ಹೊರಡುತ್ತಾರೆ, ಅವರಿಗೆ ಅಮೇರಿಕಾದವರು ಬರೆದ ಸಾಫ್ಟವೇರ್ ಅರ್ಥವಾಗುವುದಿಲ್ಲವಾದರು ಹಾರಿಸಿಯೇ ಬಿಡುತ್ತಾರೆ, ಆದರೆ ಆ ಮಿಸೈಲ್ ಭಾರತ ಕಡೆ ನುಗ್ಗುವುದು ಬಿಟ್ಟು ಅದರ ನಿಜವಾದ ಗುರಿಯ ಕಡೆ ನುಗ್ಗುತ್ತದೆ Eye-wink

ಗುರಿ : ರಷ್ಯಾ !!!

ರಷ್ಯಾ, ಪಾಕಿಗಳು ಹಾರಿಸಿದ ಮಿಸೈಲ್ ಅನ್ನು ಕ್ಷಣಾರ್ದದಲ್ಲಿ ಹೊಡೆದುರುಳಿಸಿ, ಪ್ರತಿಯಾಗಿ ತಾವು ಮಿಸೈಲ್ ಹಾರಿಸುತ್ತಾರೆ. ಪಾಕಿಸ್ತಾನ ದ್ವಂಸವಾಗಿ, ಸಹಾಯಕ್ಕಾಗಿ ವಿಶ್ವದ ಮೊರೆಯಿಡುತ್ತದೆ.

ತಕ್ಷಣ ಎಚ್ಚೆತ್ತ ಭಾರತ ಪಾಕಿಗಳಿಗೆ ಕಂಬನಿ ಮಿಡಿದು, ಮಿಲಿಯನ್ ಡಾಲರ್ನಷ್ಟು ಪಾರ್ಲೆ-ಜಿ ಬಿಸ್ಕೆಟ್ಗಳನ್ನೂ ಕಳಿಸಿಕೊಡುತ್ತದೆ.

ಹಾಗೆ ಭಾರತ ಅಣ್ವಸ್ತ್ರವನ್ನು ಬಳಸದೆ ಶಾಂತಿಯಿಂದಲೇ ಯುದ್ಧವನ್ನು ಗೆದ್ದು ಬಿಡುತ್ತದೆ!!!

- ರಾಕೇಶ್ ಶೆಟ್ಟಿ Smiling

Monday, March 23, 2009

ಈ ದಿನದ ವಿಶೇಷ ಗೊತ್ತ - ೨ ?



ಇಂದಿಗೆ ಆ ಮಹಾನ್ ಚೇತನಗಳು ಆತ್ಮಾರ್ಪಣೆ ಮಾಡಿ ೭೮ ವರ್ಷಗಳಾಯಿತು. 'ಭಗತ್ ಸಿಂಗ್, ಸುಖ್ ದೇವ್,ರಾಜ್ ಗುರು' ಎಂಬ ೩ ಯುವಕರು, ನಿಜವಾದ ಕ್ರಾಂತಿಕಾರಿಗಳು ಎಂದರೆ ಕೇವಲ ಆವೇಶದಲ್ಲಿ ಶಸ್ತ್ರ ಹಿಡಿದವರಲ್ಲ ಎಂದು ತೋರಿಸಿ, ದೇಶದ ಪ್ರತಿಯೊಬ್ಬರಲ್ಲು 'ಸ್ವಾತಂತ್ಯ್ರದ ಕಿಡಿ'ಯನ್ನು ಹೊತ್ತಿಸಿದರು.


मरके कैसे जीते है
इस दुनिया को बतलाने
तेरे लाल चले है माहे
अब तेरे लाज बचा ने ||

ಮೇಲಿನ ಈ ೪ ಸಾಲುಗಳಲ್ಲೇ ಅವರ ನಿರ್ಧಾರ ಎಷ್ಟು ಅಚಲವಾಗಿತ್ತು ಎಂಬುದು ತಿಳಿಯುತ್ತದೆ.೨೦ ರ ಆಸುಪಾಸಿನಲ್ಲೇ 'ಸರ್ವ ಧರ್ಮ ಸಮನ್ವಯ' ದ ಕನಸು ಕಂಡ, ಸ್ವತಂತ್ರ ಭಾರತ ಹೇಗಿರಬೇಕು ಎಂಬ ದೂರದೃಷ್ಟಿಯಿದ್ದ ಭಗತ ಸಿಂಗ್ ರಂತವರು ಎಂದಿಗೂ ಜನಮಾನಸದಲ್ಲಿ ಅಮರಾಗಿರುತ್ತಾರೆ.

ಇಂಕ್ವಿಲಾಬ್ ಜಿನ್ದಾಬಾದ್

(ಚಿತ್ರ ಕೃಪೆ :midhun.allubrothers.com)

Saturday, February 14, 2009

ಫೆಬ್ರವರಿ 14 : ಅದ್ಯರಾ ದಿನವೋ?

ಮೂರು options ಇದೆ, ಯಾವುದು ಒಳ್ಳೇದು ಅನ್ನಿಸುತ್ತೋ ಅದೇ ತಗೊಳ್ಳಿ.

೧.'ಪಬ್ ಭರೋ' ಚಳುವಳಿ

೨.'ಸಾಮೂಹಿಕ ಪ್ರೇಮಿಗಳ ದಿನಾಚರಣೆ'

೩.'ರಾಖಿ ಕಟ್ಟಿ ಇಲ್ಲ ತಾಳಿ ಕಟ್ಟಿ'

ಬಹುಷಃ ನಮ್ಮ ಸ್ವಾತಂತ್ರದ ಸುವರ್ಣ ಮಹೋತ್ಸವಕ್ಕೂ ಯಾರು ಇಷ್ಟೊಂದು ತಲೆ ಕೆಡಿಸಿಕೊಂಡು ಕಾರ್ಯಕ್ರಮಗಳನ್ನ ರೂಪಿಸಿರಲಿಲ್ಲ ಅನ್ನಿಸುತ್ತೆ.ಈ ಮೇಲಿನ ಮೂರು ಆಪ್ಶನ್ಗಳು ಪ್ರೇಮಿಗಳ ದಿನಕ್ಕಾಗಿ. ಬೆಂಗಳೂರಿನ ಮಟ್ಟಿಗೆ ಹೇಳುವದಾದರೆ ಈ ಎಲ್ಲ ಮಹಾನ್ ಚಳುವಳಿಗಳು 'ಮಹಾತ್ಮ ಗಾಂಧೀ' ರಸ್ತೆಯಲ್ಲೇ ನಡೆಯಬಹುದು ಅನ್ನಿಸುತ್ತೆ.

ಮೊದಲಿಗೆ ಮಾನ್ಯ ಮಹಿಳಾ ಕಲ್ಯಾಣ (?) ಸಚಿವೆ ರೇಣುಕಮ್ಮ ಪ್ರಾಯೋಜಿತ 'ಪಬ್ ಭರೋ' ಚಳುವಳಿಯಲ್ಲಿ ತೇಲಾಡಿಕೊಂಡು "ಕುಡಿಯೋದೆ ನನ್ನ ವೀಕ್ನೆಸ್ಸು" ಅಂತಾ ಹಾಡ್ಕೊಂಡು ಪಬ್ಬಿನ ಮಬ್ಬಿನಿಂದ ಹೊರ ಬಂದು ಪ್ರಗತಿಪರರಿಂದ ಒಂದು ಉಚಿತ 'ಕೆಂಪುಗುಲಾಬಿ' ಪಡೆದು "ಈ ಗುಲಾಬಿ ಹೂ ನಿನಗಾಗಿ ಇದು ಚೆಲ್ಲುವ ಪರಿಮಳ ನಿನಗಾಗಿ" ಅಂತ ಹಾಡ್ತಾ ಯಾವುದಾದರು ಹುಡುಗಿಯ ಜೊತೆ ಪಾರ್ಕಿಗೋ ಅಥವಾ ಇನ್ನೆಲೋ ಹೊರಟರೆ, ಅಲ್ಲಿಗೆ ಶ್ರೀರಾಮ ಸೇನೆಯವರು ಎಂಟ್ರಿ ಹಾಕಿ "ಸಪ್ತ ಪದಿ, ಇದು ಸಪ್ತ ಪದಿ" ಅಥವಾ "ಅಣ್ಣ ತಂಗಿಯರ ಈ ಬಂಧ" ಅಂತ ಹಾಡಿಸ್ತಾರೆ.

ಈ ಎಲ್ಲ ಮಹಾನ್ ಹೋರಾಟಗಳ ನಡುವೆ ಇನ್ನು ಕೆಲವರು ರಾಮಸೆನೆಯವರಿಗೆ ಕೊಡಲು 'ಪಿಂಕ್ ಚಡ್ಡಿ' ಸಂಗ್ರಹಿಸುತಿದ್ದಾರೆ.ಅದಕ್ಕೋಸ್ಕರವೇ ಒಂದು ಪ್ರತ್ಯೇಕ ಬ್ಲಾಗ್ ಸಹ ಶುರು ಮಾಡಿದ್ದಾರೆ.ಒಂದು ವಿಕೃತಿಯನ್ನು ವಿರೋಧಿಸಲು ಎಷ್ಟೆಲ್ಲ ವಿಕೃತಿಗಳು.

ಇವಿಷ್ಟು ಅನಾಹುತವನ್ನು ತನ್ನ ನಾಮಧೇಯದ ರಸ್ತೆಯಲ್ಲೇ ನೋಡುವ ಮಹಾತ್ಮ 'ಒಹ್! ನನ್ನ ಸ್ವತಂತ್ರ ಭಾರತವೇ' ಅಂತ ಕಂಬನಿ ಮಿಡಿಯುವುದಿಲ್ಲವೆ?

Friday, January 23, 2009

ಈ ದಿನದ ವಿಶೇಷ ನಿಮಗೆ ಗೊತ್ತಾ!?


ನೀವು ಯಾರನ್ನಾದರೂ ಒಮ್ಮೆ ಕೇಳಿ ನೋಡಿ 'ಅಕ್ಟೋಬರ್ ೨ ಹಾಗೂ ನವೆಂಬರ್ ೧೪ರ ವಿಶೇಷ ಏನು?' ಅಂತ.ಬಹುಷಃ ಎಲ್ಲರೂ ವಿಶೇಷವೇನು ಅಂತ ಹೇಳುತ್ತಾರೆ. ಅವರಿಗೆ ಜನವರಿ ೨೩ರ ವಿಶೇಷವೇನು ಎಂದು ಕೇಳಿ ನೋಡಿ.. ಗೊತ್ತಿಲ್ಲ ಸರ್ ಅನ್ನುವುವರ ಸಂಖ್ಯೆಯೇ ಹೆಚ್ಚು.ಇವತ್ತಿನ ದಿನದ ವಿಶೇಷ ನಿಮಗೆ ಗೊತ್ತ ಅಂತ ಕೇಳಿಕೊಳ್ಳಿ? ಗೊತ್ತಿಲ್ಲದಿದ್ದರೂ ತಪ್ಪು ನಿಮ್ಮದಲ್ಲ ಬಿಡಿ.ನಾವು ಓದಿರುವ ಇತಿಹಾಸ ಹಾಗೂ ನಮ್ಮ ಸರ್ಕಾರಗಳದ್ದು.

ಈ ದಿನದ ವಿಶೇಷವೆಂದರೆ ೧೧೨ ವರ್ಷಗಳ ಹಿಂದೆ ಅಂದರೆ ೧೮೯೭ರ ಜನವರಿ ೨೩ ರಂದು ಭಾರತದ ಸ್ವಾತಂತ್ಯ್ರ ಹೋರಾಟದ 'ಸಮರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್' ಅವರ ಜನ್ಮ ದಿನ.

ಸುಭಾಷರ ಬಗ್ಗೆ ಬರೆಯಲು ಬಹಳಷ್ಟಿದೆ.ಅವರ ಜೀವನವೇ ಒಂದು ರೋಚಕ ಕತೆಯ ತರ, ಆದರೆ ಆ ರೋಚಕತೆಗೆ ಒಂದು ನಿಗೂಢ ಹಾಗೂ ದುರಂತ ಅಂತ್ಯವಿದೆ. ಇದರ ಬಗ್ಗೆ ಮುಂದೆ ಯಾವಾಗಲಾದರು ಬರೆಯುತ್ತೇನೆ.

ಸದ್ಯಕ್ಕೆ, ಇವತ್ತಿನ ದಿನದ ವಿಶೇಷವನ್ನ ನಿಮ್ಮ ಸ್ನೇಹಿತರಿಗೆ,ಮಕ್ಕಳಿಗೆ ತಿಳಿಸಿದರೆ ಆ ಮಹಾ ಚೇತನಕ್ಕೆ ಗೌರವ ಸೂಚಿಸಿದಂತಾಗುತ್ತದೆಯಲ್ಲವೇ?

ಚಿತ್ರ ಕೃಪೆ :ನೇತಾಜಿ.ನೆಟ್ ಫಾರ್ಮ್ಸ್.ಕಾಂ

Saturday, January 17, 2009

ಮುಂಗಾರು ಮಳೆ ಬಂದ ಮೇಲೆ ಕ್ವಾಲಿಟಿ ಬಂತಾ???

ಮಧ್ಯಾನ್ಹದ ಊಟ ಮುಗಿಸಿ ಸಹುದ್ಯೋಗಿಗಳೊಂದಿಗೆ ಸೇರಿ ಒಂದು ರೌಂಡ್ಸ್ ಹೋಗೋ ಅಭ್ಯಾಸ ಇದೆ.ನಿನ್ನೆ ಹಾಗೆ ಹೋಗುವಾಗ, ಗೆಳೆಯ ಕಾರ್ತಿಕ್ ಹೇಳಿದ್ರು 'ಬೆಳಿಗ್ಗೆ ಎದ್ದ ತಕ್ಷಣ ನಾನು ರೇಡಿಯೋ ಕೇಳೋ ಅಭ್ಯಾಸ ಮಾಡ್ಕೊಂಡಿದ್ದೀನಿ'. ಓಹೋ,ಇದೇನೋ ಹೊಸ ಅಭ್ಯಾಸ ಅಂತ ಸವಿತ ಕೇಳಿದ್ರು.

ಅದಕ್ಕೆ, ನಾನು ಈಗ ಕೆಲವು FM ಗಳಲ್ಲಿ ಕನ್ನಡ ಹಾಡು ಮಾತ್ರ ಹಾಕ್ತಾ ಇದ್ದಾರೆ ಅಲ್ವಾ ಅಂದೆ, ಅದಕ್ಕೆ ಕಾರ್ತಿಕ್ ಹೌದು ಹೌದು , ಇತ್ತೀಚಿಗೆ ಕನ್ನಡದ ಹಾಡುಗಳು ಚೆನ್ನಾಗಿ ಬರುತ್ತಿವೆ ಅಂದ್ರು!

ನಾನು ಸವಿತ ಇಬ್ಬರು ಒಟ್ಟಿಗೆ "ಅಂದ್ರೆ ಏನಪ್ಪಾ ಮೊದಲೆಲ್ಲ ಚೆನ್ನಗಿರಲಿಲ್ವಾ?" ಅಂದ್ವು.
ಅವರು " ಇಲ್ಲ ಇಲ್ಲ 'ಮುಂಗಾರು ಮಳೆ' ಬಂದ ಮೇಲೆ ಕನ್ನಡದಲ್ಲಿ ಹಾಡುಗಳು ಚೆನ್ನಾಗಿ ಬರ್ತಾ ಇದೆ" ಅನ್ನೋದಾ?

ಅಲ್ಲ ಗುರುವೇ, ನಿನಗೆ ಹಳೆ ಕನ್ನಡ ಚಿತ್ರ ಗೀತೆಗಳ ಬಗ್ಗೆ ಗೊತ್ತಾ? ಕೇಳಿದ್ದಿಯಾ? ಅಂದ್ರೆ,ಪುಣ್ಯಾತ್ಮ ಕಾರ್ತಿಕ್ ಅವರದೇ ಧಾಟಿಯಲ್ಲಿ ಹೇಳುತ್ತಾ ಹೋದರು,
'ಸೋನು ,ಶ್ರೇಯ,ಸುನಿಧಿ,ಗಾಂಜಾವಾಲ' ಎಲ್ಲ ಈಗ ಕನ್ನಡದಲ್ಲಿ ಹಾಡ್ತಾ ಇರೋದ್ರಿಂದ ಕ್ವಾಲಿಟಿ ಚೆನ್ನಾಗಿದೆ.

ಸವಿತ ಏನೇ ಹೇಳಿದರು, ಕಾರ್ತಿಕ್ಗೆ ಅವರು ಹೇಳಿದ್ದೆ ಸರಿ ಅನ್ನುವಂತೆ ಅಸಂಬದ್ಧವಾಗಿ ವಾದ ಮಾಡುತ್ತಲೇ ಹೋದರು. ಅಂದ ಹಾಗೆ ಈ ಕಾರ್ತಿಕ್ ಕನ್ನಡದವರಲ್ಲ, ತೆಲುಗಿನವರು. ಆದ್ರೆ ಕನ್ನಡ ಮಾತನಾಡುತ್ತಾರೆ,ಕನ್ನಡ ಸಿನಿಮಾ ನೋಡ್ತಾರೆ.

ಅವರು ಹೇಳಿದ ಮಾತಿನಿಂದ ನನಗೆ ಎರಡು ವಿಷಯಗಳು ತಲೆಯಲ್ಲಿ ಹರಿಯಲಾರಂಭಿಸಿತು.
೧. ಯಾವುದೇ ವಿಷಯದ ಅರಿವು ಇಲ್ಲದೆ, ಟೀಕೆ- ಟಿಪ್ಪಣಿ ಮಾಡುತ್ತಾ, ಸ್ವಲ್ಪ ಜ್ಞಾನವು ಇಲ್ಲದೆ ತೀರ್ಪನ್ನು ಕೊಟ್ಟು ಬಿಡುವ ಅವಿವೇಕಿಗಳ ಬಗ್ಗೆ.
೨. ಇತ್ತೀಚಿಗೆ ಕನ್ನಡ ಚಿತ್ರಗಳಲ್ಲಿ ಅತಿಯಾಗಿ ಬಾಲಿವುಡ್ನ ಗಾಯಕ ಗಾಯಕಿಯರಿಗೆ ಮಣೆ ಹಾಕಲಾಗುತ್ತಿದೆಯೇ ಎಂಬ ಬಗ್ಗೆ ?

ಆದರೆ, ಇವೆರಡರಲ್ಲಿ ಮೊದಲನೆ ವಿಷಯ ಸ್ವಲ್ಪ ವಿಚಾರ ಮಾಡಬೇಕಾದದ್ದು, ಅದೇನಿದ್ದರೂ ವಿಚಾರವಾದಿಗಳಿಗೆ, ಬುದ್ದಿಜೀವಿ(?)ಗಳಿಗೆ ಇರಲಿ ಅಂತ ಬಿಟ್ಟು,ಎರಡನೇ ವಿಷಯದ ಬಗ್ಗೆ ಬರೆಯುತಿದ್ದೇನೆ.

ಹೌದು, ಇಲ್ಲ ಅಂದ್ರು ಇತ್ತೀಚಿಗೆ ಕನ್ನಡ ಚಿತ್ರಗಳಲ್ಲಿ ಅತಿ ಎನಿಸುವಷ್ಟು ಬಾಲಿವುಡ್ ಗಾಯಕ ಗಾಯಕಿಯರಿಗೆ ಮಣೆ ಹಾಕಲಾಗುತ್ತಿದೆ. ಖಂಡಿತ ಅವರ ಪ್ರತಿಭೆಯ ಬಗ್ಗೆ ಎರಡು ಮಾತಿಲ್ಲ. ಶ್ರೇಯ ಹಾಡುವ ಶೈಲಿ ಇದೆಯಲ್ಲ, ಅವಳು ಒಂದೊಂದೇ ಶಬ್ದವನ್ನು ಅಪ್ಪಟ ಕನ್ನಡತಿಯಂತೆ ಉಚ್ಚಾರಿಸುತ್ತಾಳೆ, ಸೋನು ಹಾಡಿನಲ್ಲೇ ಕಿಕ್ ಬರಿಸುತ್ತಾನೆ ಅವರೆಲ್ಲ ಪ್ರತಿಭಾವಂತರೆ ಆ ಬಗ್ಗೆ ಎರಡು ಮಾತಿಲ್ಲ.

ಕನ್ನಡ ಚಿತ್ರ ರಂಗದಲ್ಲಿ ಇದು ಹೆಚ್ಚಾಗಿ ಆಗುತ್ತಿದೆ, ಹೀಗೆ ಸ್ವಲ್ಪ ದಿನದ ಹಿಂದೆ ಕನ್ನಡ ಗಾಯಕ ಗಾಯಕಿಯರು , ನಿರ್ಮಾಪಕರ ಈ ನೀತಿಯನ್ನು ವೀರೋಧಿಸಿದ್ದರು, ಆಗ ಒಬ್ಬ ಸಂಗೀತ ನಿರ್ದೇಶಕರು 'ಇಲ್ಲಪ್ಪ, ಆಗಕ್ಕಿಲ್ಲ ಆ ಸೋನು , ಶ್ರೇಯ ಇಲ್ಲ ಅಂದ್ರೆ ನಂಗೆ ಮ್ಯೂಸಿಕ್ ಮಾಡಕ್ಕೆ ಆಗಕಿಲ್ಲ" ಅಂದ್ರು ಅಂತ ಪೇಪರ್ನಲ್ಲಿ ಓದಿದ ನೆನಪು. ಪಾಪ Sad ಅವರಿಗೆ ಆ ಗಾಯಕರ ಮೇಲೆ ಇರುವಷ್ಟು ನಂಬಿಕೆ ಅವರ ಸಂಗೀತದ ಮೇಲೆ ಇಲ್ಲ ಅನ್ನಿಸುತ್ತೆ!

ಈ ಮಾತು ಹೇಳುವಾಗ ಎಲ್ಲರೂ ಒಂದು ಮಾತು ಹೇಳುತ್ತಾರೆ "ಸಂಗೀತಕ್ಕೆ ಯಾವುದೇ ಭಾಷೆಯಿಲ್ಲ, ಕಲಾವಿದರಿಗೆ ಭಾಷೆಯ ಪರಿಧಿಯಿಲ್ಲ" ಅಂತ, ನಿಜ ನಿಜ ಒಪ್ಪುವಂತದ್ದೆ.

ನಮ್ಮ ನಿರ್ಮಾಪಕರ ತಲೆಯಲ್ಲಿ ಅದ್ಯಾವ ದೈವ ವಾಣಿ ಆಗಿದೆಯೋ ತಿಳಿಯದು, ಬಹಳಷ್ಟು ನಿರ್ಮಾಪಕರಿಗೆ ಸಂದರ್ಶನದಲ್ಲಿ "ಕನ್ನಡ ಗಾಯಕರನ್ನು ಏಕೆ ಬಳಸಿಲ್ಲ?" ಅಂತ ಕೇಳಿದರೆ, "ಬಾಲಿವುಡ್ ಗಾಯಕ/ಗಾಯಕಿಯರ ಹೆಸರಿದ್ದರೆ ಜನ ಹಾಡು ಜಾಸ್ತಿ ಕೇಳ್ತಾರೆ" ಅಂತಾರೆ.
ಅಂದ್ರೆ ಏನರ್ಥ ಸ್ವಾಮಿ ಸಂಗೀತ, ಸಾಹಿತ್ಯ ಹೇಗಿದ್ರು ಪರವಾಗಿಲ್ಲ, ಅವರು ಹಾಡಿಬಿಟ್ಟರೆ ಅದು ಚೆನ್ನಾಗಿ ಆಗುತ್ತೆ ಅಂತಾನಾ? ಅಬ್ಬಾ!

'ಉಪ್ಪಿನಕಾಯಿಯನ್ನು ಊಟದ ಜೊತೆಗೆ ತಿಂದರೆ ಚಂದ, ಆದರೆ ಚೆನ್ನಾಗಿದೆ ಅಂತ, ಉಪ್ಪಿನಕಾಯಿಯನ್ನೇ ಊಟ ಎಂದು ತಿನ್ನಲಾಗುತ್ತದೆಯೇ?'

ನನಗೆ ಅನ್ನಿಸೋದು ಅವರನ್ನು ಬಳಸಿಕೊಳ್ಳೋದು ತಪ್ಪಲ್ಲ, ಆದರೆ ನಮ್ಮಲ್ಲೇ ಪ್ರತಿಭೆಗಳಿರುವಾಗ ಅವರನ್ನು ಸ್ವಲ್ಪ ಕಡಿಮೆಯಾಗಿ, ಬೇಕು ಎನಿಸುವಂತ ಹಾಡುಗಳಿಗೆ ಮಾತ್ರ ಕರೆಸಬಹುದಲ್ವಾ?

ನಿಮಗೆ ಈ ರೀತಿ ಅನ್ನಿಸುವುದಿಲ್ಲವೇ?

-- ರಾಕೇಶ್ ಶೆಟ್ಟಿ Smiling

ಭಾರತಾಂಬೆಯ ವೀರ ಪುತ್ರರಿವರು, ಮುಂಬೈ ಮಾರಣಹೋಮದ ಹುತಾತ್ಮರಿವರು

ಮುಂಬೈ ಮಾರಣ ಹೋಮದಲ್ಲಿ , ನಮ್ಮ ನಾಳೆಗಳಿಗಾಗಿ, ತಾಯ್ನೆಲದ ರಕ್ಷಣೆಗಾಗಿ ಹುತಾತ್ಮರಾದ ವೀರ ಯೋಧರ ಹೆಸರಿದು. ಮಿಂಚಂಚೆಯಲ್ಲಿ ಬಂದಿದ್ದು. ನನಗೆ ಸಿಕ್ಕ ಮಾಚಿತಿಯಿಷ್ಟು, ಇನ್ನು ಯಾವುದಾದರು ಹೆಸರಿದ್ದರೆ ದಯವಿಟ್ಟು ಇಲ್ಲಿ ಸೇರಿಸಿ

ಭಾರತಾಂಬೆಯ ಈ ವೀರ ಪುತ್ರರು ಅಮರರಾಗಲಿ .

ಕಾನ್ಸ್ ಟೇಬಲ್ - ಜಯವಂತ್ ಪಾಟೀಲ್
ಕಾನ್ಸ್ ಟೇಬಲ್ - ಯೋಗೇಶ್ ಪಾಟೀಲ್
ಕಾನ್ಸ್ ಟೇಬಲ್ - ಅಮ್ಬದಾಸ್ ಪವಾರ್
ಕಾನ್ಸ್ ಟೇಬಲ್ - ಎ .ಆರ್ ಚಿಟ್ಟೆ
ಕಾನ್ಸ್ ಟೇಬಲ್ - ವಿಜಯ್ ಖಂಡೇಕರ್
ರೈಲ್ವೆ ಪೋಲಿಸ್ - ಎಂ.ಸಿ .ಚೌದರಿ
N.S.G ಕಮಾಂಡೋ - ಗಜೆಂದರ್ ಸಿಂಗ್
ಇನ್ಸ್ಪೆಕ್ಟರ್ - ಶಶಾಂಕ್ ಶಿಂದೆ
Asst. ಸಬ್ ಇನ್ಸ್ಪೆಕ್ಟರ್ - ವಿ.ಒಬಲೇ
ಸಬ್ ಇನ್ಸ್ಪೆಕ್ಟರ್ - ಪ್ರಕಾಶ್ ಮೊರೆ
ಸಬ್ ಇನ್ಸ್ಪೆಕ್ಟರ್ - ಬಾಬುಸಾಹೇಬ್ ದುರ್ಗುಡೆ
ಸಬ್ ಇನ್ಸ್ಪೆಕ್ಟರ್ - ನಾನಸಹೇಬ್ ಭೋಸ್ಲೆ
ಸಬ್ ಇನ್ಸ್ಪೆಕ್ಟರ್ - ತುಕಾರಾಂ ಓಂಭ್ಲೆ
ಮೇಜರ್ - ಸಂದೀಪ್ ಉನ್ನಿ ಕೃಷ್ಣನ್
ಹೆಚ್ಚುವರಿ ಪೋಲಿಸ್ ಕಮೀಷನರ್ - ಅಶೋಕ್ ಕಾಮ್ಟೆ
ಸೀನಿಯರ್ ಪೋಲಿಸ್ ಇನ್ಸ್ಪೆಕ್ಟರ್ - ವಿಜಯ್ ಸಾಲಸ್ಕರ್
ATS ಮುಖ್ಯಸ್ತ - ಹೇಮಂತ್ ಕರ್ಕರೆ

ಜೈ ಹಿಂದ್