Sunday, April 12, 2009

ಭಾರತೀಯರೇ ಇಲ್ಲದ ಭಾರತ!!

ಅಮೆರಿಕನ್ ಪ್ರಜೆ ಒಬ್ಬ ಭಾರತಕ್ಕೆ ಭೇಟಿ ನೀಡಿ ತನ್ನ ದೇಶಕ್ಕೆ ವಾಪಸಾದ, ಅಲ್ಲಿ ಅವನ ಭಾರತೀಯ ಗೆಳೆಯ, ಅಮೆರಿಕನ್ ಪ್ರಜೆಯನ್ನು ಕೇಳಿದ,

"ನನ್ನ ದೇಶದ ಬಗ್ಗೆ ನಿನಗೆ ಏನನ್ನಿಸಿತು?"

ಅಮೆರಿಕನ್ ಹೇಳಿದ,
"ಇಂಡಿಯಾದ ಭವ್ಯ ನಾಗರಿಕತೆ, ಅಲ್ಲಿನ ಜನರ ಪ್ರೀತಿ, ಅಮೋಘ ಇತಿಹಾಸ, ಶಿಲ್ಪಿ ಕಲೆ, ಅಲ್ಲಿನ ನೈಸರ್ಗಿಕ ಸಂಪತ್ತು,ವಾವ್! ಎಲ್ಲವು ಅದ್ಭುತ"

"ಅದು ಖುಷಿಯ ವಿಚಾರ, ಸರಿ 'ಇಂಡಿಯನ್ಸ್' ಬಗ್ಗೆ ನಿನಗೆ ಏನನ್ನಿಸಿತು?"

"ಇಂಡಿಯನ್ಸ್!?ಯಾರದು??, ನನಗೆ ಒಬ್ಬನೇ ಒಬ್ಬ ಭಾರತೀಯ ಸಿಗಲಿಲ್ಲ "

"ಏನು ಇಂಡಿಯಾದಲ್ಲಿ,ಇಂಡಿಯನ್ಸ್ ಸಿಗಲಿಲ್ಲವೇ?ಏನು ಮಾತಾಡುತಿದ್ದಿಯಾ?ಇಂಡಿಯದಲ್ಲಿ ಇಂಡಿಯನ್ಸ್ ಅಲ್ಲದೆ ಮತ್ತಾರು ಸಿಗಲು ಸಾಧ್ಯ?"

ಅಮೆರಿಕನ್ ಹೇಳಿದ,
"ಕಾಶ್ಮೀರದಲ್ಲಿ ಒಬ್ಬ ಕಾಶ್ಮೀರಿಯನ್ನು ಭೇಟಿ ಮಾಡಿದೆ, ಪಂಜಾಬಿನಲ್ಲಿ ಒಬ್ಬ ಪಂಜಾಬಿಯನ್ನು, ಅದೇ ರೀತಿ
ಬಿಹಾರ,ಮಹಾರಾಷ್ಟ್ರ,ರಾಜಸ್ತಾನ್,ಬಂಗಾಳ,ತಮಿಳುನಾಡು,ಕೇರಳಗಳಲ್ಲಿ
ಬಿಹಾರಿ,ಮರಾಠಿ,ರಾಜಸ್ತಾನಿ,ಬೆಂಗಾಲಿ,ತಮಿಳ,ಮಲಯಾಳಿಗಳನ್ನೂ ಭೇಟಿ ಮಾಡಿದೆ "

ಮತ್ತೆ ಮುಂದುವರೆದು ಹೇಳಿದ
"ಆ ನಂತರ ನಾನು ಒಬ್ಬ ಹಿಂದೂ,ಒಬ್ಬ ಮುಸಲ್ಮಾನ, ಒಬ್ಬ ಕ್ರೈಸ್ತ, ಒಬ್ಬ ಪಾರಸಿ, ಒಬ್ಬ ಜೈನ, ಒಬ್ಬ ಬೌದ್ದ ಹೀಗೆ ಹಲವಾರು ಜನರನ್ನು ಭೇಟಿಯಾದೆ, ಆದರೆ ನನಗೆ "ಇಂಡಿಯದಲ್ಲಿ ಒಬ್ಬನೇ ಒಬ್ಬ ಇಂಡಿಯನ್" ಸಿಗಲಿಲ್ಲ "

ಇದು ಮಿಂಚೆಯಲ್ಲಿ ಬಂದಿತ್ತು .ಇದನ್ನು ಹಾಸ್ಯವೆಂದಾದರು ಪರಿಗಣಿಸಿ, ಇಲ್ಲ ವಿಷಾದ ಅಂತ ಆದರೂ ಪರಿಗಣಿಸಿ, ಆದರೆ ನನಗನ್ನಿಸುವದರ ಮಟ್ಟಿಗೆ ಇದು ನಗ್ನ ಸತ್ಯ.ಪ್ರಾದೇಶಿಕ ಅಸಮಾನತೆಯನ್ನು ಹುಟ್ಟು ಹಾಕಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಪಕ್ಷ ಹಾಗೂ ರಾಜಕಾರಣಿಗಳಿಂದ ಭಾರತದಲ್ಲಿ ಭಾರತೀಯರೇ ಇಲ್ಲದಂತಾಗುತ್ತಿದ್ದಾರೆ, ಅಲ್ಲವೇ?

ಸಿಗ್ನಲ್ ಸುಂದರಿ

ಕಣ್ಣೆದುರು ನಿಂತ ಕನಸಿನ ಕನ್ಯೆಗೆ
ಕರಾವಳಿಯ ಕಡಲಲೆಯ ಮೇಲೊಂದು
ಕಾವ್ಯ ಸೌಧವ ಕಟ್ಟಿ ನಲ್ಮೆಯ ನೌಕೆಯಲ್ಲಿ ಕೂರಿಸಿ
ಒಲವ ನೀವೆದನೆ ಮಾಡಿ ಅವಳು ಒಪ್ಪಿದರೆ ಎನ್ನ
ಮನದ ಅರಮನೆಗೆ ಅವಳನ್ನೇ ರಾಜಕುಮಾರಿ ಮಾಡಿ
ಪ್ರೇಮ ಪಲ್ಲಕ್ಕಿಯಲ್ಲಿ ಕೂರಿಸಿ ಕಾವೇರಮ್ಮನ ಮಡಿಲಲ್ಲಿ
ಆಗಸದೆತ್ತರದ ಚಪ್ಪರ ಹಾಕಿಸಿ ಸಪ್ತ ಸ್ವರಗಳ ಹಿಮ್ಮೇಳದಲ್ಲಿ
ತುಳುನಾಡ ಮಗನ ಮನೆಗೆ ಮಲೆನಾಡ ಮಗಳ ಕರೆತರಲೇನು
ಎಂದು ಅವಳ ಕೇಳ ಹೋಗಬೇಕೆನ್ನುವಷ್ಟರಲ್ಲಿ
ತೂರಿ ಬಂತೊಂದು ವಾಯ್ಸು
"ಗಾಡಿ ಸೈಡಿಗೆ ಹಾಕ್ರಿ, ಡಿ.ಎಲ್ ತೆಗಿರಿ,
ಏನ್, ಸಿಗ್ನಲ್ನಲ್ಲೆ ಕನಸ್ ಕಾಣ್ತಾ ಇದ್ದೀರಾ!!!!"

- ರಾಕೇಶ್ ಶೆಟ್ಟಿ Smiling

ಬೆಂಕಿ ಬಿತ್ತು ಕಂಪೆನಿಗೆ!!

ಕಂಪೆನಿಗೆ ಬೆಂಕಿ ಬಿದ್ದಾಗ ಏನೆಲ್ಲಾ ಆಗುತ್ತೆ ಅಂತ ಹೇಳೋ ಒಂದು ಮಿಂಚೆ ಬಂದಿತ್ತು.

'ಉಂಡೆನಾಮ' ಕಂಪೆನಿಯಲ್ಲಿ ಎಂದಿನಂತೆ ಉದ್ಯೋಗಿಗಳು ಕೆಲಸದಲ್ಲಿ ತಲ್ಲಿನರಾಗಿರುವಾಗ 'ಫೈರ್ ಅಲಾರಂ' ಆಯ್ತು, ಐದು ಸಾವಿರದಷ್ಟು ಉದ್ಯೋಗಿಗಳು ಕ್ಷಣ ಮಾತ್ರದಲ್ಲಿ ಕಂಪೆನಿಯ ಹೊರಗೋಡಿ ಬಂದು 'ಸೇಫ್ ಜೋನ್' ಅಲ್ಲಿ ನಿಂತರು. ೫ ನಿಮಿಷವಾಯ್ತು , ೧೦ ನಿಮಿಷವಾಯ್ತು... ಕಡೆಗೆ ಎಲ್ಲ ಉದ್ಯೋಗಿಗಳು ಹೊರ ಬಂದ ಮೇಲೆ,

ಸೆಕ್ಯೂರಿಟಿ ಆಫಿಸರ್ ಅನೌನ್ಸ್ ಮಾಡಿದ :
"ಪ್ರೀತಿಯ ಉದ್ಯೋಗಿಗಳೇ ಭಾರವಾದ ಹೃದಯದಿಂದ ನಿಮಗೆ ಒಂದು ವಿಷಯ ಹೇಳಲಿಚ್ಚಿಸುತ್ತೇನೆ, ನಿಮ್ಮಲ್ಲಿ ಹಲವರಿಗೆ ಬಹುಷಃ ಇದೆ ಕಡೆಯ 'ಮಾಕ್ ಫೈರ್ ಡ್ರಿಲ್' ಆಗಿರಬಹುದು.ಕಾರಣ ಮ್ಯಾನೆಜ್ಮೆಂಟ್ನವರು ೮೦% ಉದ್ಯೋಗಿಗಳನ್ನು lay-off ಮಾಡಲು ನಿರ್ಧರಿಸಿದ್ದಾರೆ. ಒಳ ಬರುವಾಗ ಯಾರ ಯಾರ "ಐಡಿ ಕಾರ್ಡ್" ಕೆಲಸ ಮಾಡುವುದಿಲ್ಲವೋ ಅವರನ್ನೆಲ್ಲ ತೆಗೆದು ಹಾಕಲಾಗಿದೆ ಹಾಗು ಅವರ ವಸ್ತುಗಳನ್ನೆಲ್ಲ ಕೊರಿಯರ್ ಮಾಡಲಾಗುತ್ತದೆ!!! "

- ರಾಕೇಶ್ ಶೆಟ್ಟಿ Smiling

ಮಾತಿಗೊಮ್ಮೆ 'ಇಂಡಿಯಾ,ಇಂಡಿಯನ್ಸ್' ಅನ್ನುವ ಮೊದಲು


ಕೆಲವರಿರುತ್ತಾರೆ,ಅವರ ಕೈಯಲ್ಲಿ ಮಾಡಲಾಗದ ಕೆಲಸಕ್ಕೆಲ್ಲ ದೇಶವನ್ನೇ ಬೈಯ್ಯುವವರು, ನನ್ನ ಒಬ್ಬ ಗೆಳೆಯ ಇದ್ದಾನೆ, ಅವನಿಗೆ ಹೇಳಿದ ಟೈಮ್ಗೆ ಬರೋ ಅಭ್ಯಾಸನೆ ಇಲ್ಲ, ಕೇಳಿದ್ರೆ
"ನೋಡಮ್ಮ ,ನಾವ್ ಎಷ್ಟೇ ಆದ್ರೂ 'ಇಂಡಿಯನ್ಸ್' ನಾವ್ ಹಿಂಗೆ ಬರೋದು ಅಂತಾನೆ'.

ಮೊನ್ನೆ ಊಟಕ್ಕೆ ಅಂತ ನಮ್ಮ ಆಫಿಸ್ ಅತ್ರ ಇರೋ 'ನಿಸರ್ಗ' ಅನ್ನೋ ಹೋಟೆಲ್ಗೆ ಹೋದಾಗ, ನಾ ಕುಳಿತಿದ್ದ ಟೇಬಲ್ನಲ್ಲೆ ಇಬ್ಬರು ಮಹಾಶಯರು ಕುಳಿತಿದ್ದರು. ಅವರಲ್ಲೊಬ್ಬ ತನ್ನ ಕುಂಬಳಕಾಯಿಯಂತ ಹೊಟ್ಟೆಯ ಮೇಲೆ ಕೈಯಾಡಿಸುತ್ತಾ ಹೇಳಿದ,

'ನೀನ್ ಏನೇ ಹೇಳಮ್ಮ ನಮ್ಮ್ ದೇಶದಲ್ಲಿ ಶಾಲೆಯಲ್ಲಿ ಹೆಲ್ತ್ ಬಗ್ಗೆ ಓದಿಸೋದೆ ಇಲ್ಲ ನೋಡು',
ಅದಕ್ಕೆ ಮತ್ತೊಬ್ಬ 'ಹ್ಞೂ ಕಣೋ, ನಮ್ ದೇಶದಲ್ಲಿ ಮಾತ್ರ ಹಿಂಗೆ, ಬೇರೆ ದೇಶದಲ್ಲೆಲ್ಲ ಮಿಲಿಟರಿ ಟ್ರೈನಿಂಗ್ ಕಡ್ಡಾಯ ಮಾಡಿರ್ತಾರೆ, ಹಾಗಾದ್ರೂ ಇದ್ದಿದ್ರೆ ಹೆಂಗೋ ಒಳ್ಳೆ ಬಾಡಿ ಮೈನ್ಟೈನ್ ಮಾಡಬಹುದಿತ್ತು, ಅಲ್ವಾ?'
'ಹೌದು ಗುರು, ಎಷ್ಟಾದ್ರೂ ಇದು ಇಂಡಿಯಾ ಬಿಡು, ಇಲ್ಲಿ ಹಂಗೆಲ್ಲ ಆಗೋಲ್ಲ' ... ಹೀಗೆ ಮುಂದುವರೆದಿತ್ತು ಅವರ ಹರಟೆ.

ಅಲ್ಲ ಸ್ವಾಮೀ, ಆ ಪುಣ್ಯಾತ್ಮನಿಗೆ ಸರಿಯಾದ ಸಮಯಕ್ಕೆ ಬರಲಾಗುವುದಿಲ್ಲವಾದರೆ ಅದನ್ನು ದೇಶದ ಮೇಲೆ ಹೇಳುತ್ತಾನೆ, ಮತ್ತೊಬ್ಬ ಪುಣ್ಯಾತ್ಮ ಫಿಜ್ಜ,ಬರ್ಗರ್ ತಿಂದು ಕೊಬ್ಬು ಬೆಳೆಸಿಕೊಂಡು ಅದನ್ನು ದೇಶದ ತಲೆಗೆ ಕಟ್ಟುತ್ತಾನೆ!! ದೇಶವನ್ನು ಬೈಯ್ಯುವುದು ನಮಗೆ ಕಡ್ಲೆ ಪುರಿ ತಿಂದಷ್ಟೇ ಸುಲಭವಾಗಿ ಬಿಟ್ಟಿದೆ.

ನಾವ್ಯಾಕೆ ಹೀಗೆ ನಮ್ಮ ದೇಶದ ಬಗ್ಗೆಯೇ ನೆಗೆಟೀವ್ ಆಗಿ ಮಾತಾಡ್ತೀವಿ? ನಮಗೆ ಯಾಕೆ ದೇಶದ ಮೇಲೆ ಈ ಪರಿ ಸಿಟ್ಟು? ದೇಶದ ಮೇಲೆ ಇಷ್ಟೆಲ್ಲಾ ಮಾತಾಡುವ ಮೊದಲು,ನಾವೆಷ್ಟು ಸರಿಯಿದ್ದೇವೆ ಅಂತ ನಾವ್ಯಾಕೆ ಕೇಳಿಕೊಳ್ಳುವುದಿಲ್ಲ? ಈ ದೇಶ ಉದ್ದಾರ ಆಗೋಲ್ಲ, ಬದಲಾಗೊಲ್ಲ ಅನ್ನುವುದಕಿಂತ ಮೊದಲು, ನಾವು ಬದಲಾಗಬೇಕು, ನಾವು ಯೋಚಿಸುವ ರೀತಿ ಬದಲಾಗಬೇಕು, ಈ ದೇಶವನ್ನು ಮುನ್ನಡೆಸುತ್ತಿರುವ ನಾಯಕರು ಹಾಗು ಅವರ ಮನಸ್ತಿತಿ ಬದಲಾಗಬೇಕು.

ಇನ್ನೊಮ್ಮೆ 'ಇಂಡಿಯಾ,ಇಂಡಿಯನ್ಸ್' ಅನ್ನುವ ಮೊದಲು , ನಾವೆಷ್ಟು ಸರಿಯಿದ್ದೇವೆ ಅಂದು ಕೇಳಿಕೊಳ್ಳೋಣವೇ?

(ಚಿತ್ರ ಕೃಪೆ :http://www.goodcommitment.tv)

ರಾಕೇಶ್ ಶೆಟ್ಟಿ Smiling

ಭಾರತ - ಪಾಕಿಸ್ತಾನದ ಮಧ್ಯೆ ಅಣ್ವಸ್ತ್ರ ಸಮರ ನಡೆದರೆ?

ಹೌದು ನಡೆದರೆ ಏನಾಗುತ್ತೆ? ಅಂತ ವಿಡಂಬನಾತ್ಮಕವಾಗಿ ವಿವರಿಸುವ ಮಿಂಚೆಯೊಂದು ಬಂದಿತ್ತು,

'ಶೀತಲ ಸಮರ'ದ ಸಮಯದಲ್ಲಿ ಅಮೆರಿಕಾವೆನಾದ್ರು ರಷ್ಯಾದ ಮೇಲೆ ಅಣ್ವಸ್ತ್ರ ಸಿಡಿತಲೆ ಪ್ರಯೋಗಿಸಿದ್ದರೆ, ರಷ್ಯಾಕ್ಕೆ ಅದು ೩ ಸೆಕೆಂಡ್ಗಳಲ್ಲಿ ತಿಳಿಯುತ್ತಿತ್ತು ಮತ್ತು ಅದಕ್ಕೆ ಪ್ರತಿ ಅಸ್ತ್ರ ಪ್ರಯೋಗಿಸಲು ಕೇವಲ ೪೫ ಸೆಕೆಂಡ್ಗಳು ಸಾಕಿತ್ತು.

ಮುಂಬೈ ಮಾರಣ ಹೋಮದ ನಂತರ ಭಾರತ - ಪಾಕಿಸ್ತಾನದ ನಡುವೆ ಯುದ್ದ ಭೀತಿ ಶುರುವಾಗಿದೆಯಲ್ಲ (!), ಯುದ್ಧ ನಡೆದರೆ ಹೀಗಾಗಬಹುದು!!

ಪಾಕಿ ಸೈನ್ಯ ಭಾರತದ ಮೇಲೆ ಅಣ್ವಸ್ತ್ರ ಪ್ರಯೋಗಿಸಲು ತೀರ್ಮಾನಿಸುತ್ತದೆ, ಹಾಗೂ ಪ್ರಯೋಗಿಸಿಯೂ ಬಿಡುತ್ತದೆ.(ನೆನಪಿರಲಿ, ಹಾಗೆ ಮಾಡಲು ಅದಕ್ಕೆ ಸರ್ಕಾರದ ಆಜ್ಞೆಗೆ ಕಾಯುವ ಅಗತ್ಯ ಇಲ್ಲ)

ಭಾರತದ ಟೆಕ್ನಾಲಜಿ ಚೆನ್ನಾಗಿರುವುದರಿಂದ ಕೇವಲ ೮ ಸೆಕೆಂಡ್ ಗಳಲ್ಲೇ ಅದಕ್ಕೆ ವಿಷಯ ತಿಳಿದು ಹೋಗುತ್ತದೆ, ಪ್ರತಿ ಅಸ್ತ್ರ ಪ್ರಯೋಗಿಸಲು ಭಾರತಿಯ ಸೈನ್ಯ ನಿರ್ಧಾರ ಮಾಡುತ್ತದೆ.ಆದರೆ ಅವರಿಗೆ ಹಾಗೆ ಮಾಡಲು ಸರ್ಕಾರದ ಆಜ್ಞೆ ಬೇಕಲ್ಲಾ!!

ಸೈನ್ಯವು 'ರಾಷ್ಟ್ರಪತಿ'ಯವರಿಗೆ ಈ ಬಗ್ಗೆ ಪತ್ರವೊಂದನ್ನು ಕಳಿಸುತ್ತದೆ, ಅವರು ಅದನ್ನು 'ಕ್ಯಾಬಿನೆಟ್'ನ ಮುಂದಿಡುತ್ತಾರೆ.ಪ್ರಧಾನಿ ತುರ್ತು ಲೋಕ ಸಭೆ ಅಧಿವೇಶನ ಕರೆಯುತ್ತಾರೆ. ಆದರೆ ಗೊತ್ತಲ್ಲ, ನಮ್ಮ ರಾಜಕೀಯ ನಾಯಕರು 'ಸಭಾತ್ಯಾಗ' ಹಾಗೂ 'ಗದ್ದಲವೆಬ್ಬಿಸುತ್ತಾರೆ'. ಲೋಕ ಸಭೆಯ ಅಧಿವೇಶನ ಅನಿರ್ದಿಷ್ಟ ಅವಧಿಗೆ ಮುಂದೂಡಲ್ಪಡುತ್ತದೆ.
ರಾಷ್ಟ್ರಪತಿಯವರು ತುರ್ತು ನಿರ್ಣಯ ಕೈಗೊಳ್ಳುವಂತೆ ಆದೇಶಿಸುತ್ತಾರೆ.

ಅತ್ತ ಪಾಕಿಗಳು ಹಾರಿಸಿದ ಮಿಸೈಲ್ ತಾಂತ್ರಿಕ ಕಾರಣದಿಂದ ಫೇಲ್ ಆಗಿ ಅವರು ಮತ್ತೊಮ್ಮೆ ಹಾರಿಸುವ ಯತ್ನದಲ್ಲಿರುತ್ತಾರೆ.

ಇತ್ತ ಭಾರತದಲ್ಲಿ ಕೇಂದ್ರ ಸರ್ಕಾರಕ್ಕೆ ಬಾಹ್ಯ ಬೆಂಬಲ ಕೊಟ್ಟಿದ್ದ ಪಕ್ಷವೊಂದು ಬೆಂಬಲ ಹಿಂತೆಗೆದುಕೊಂಡು ಸರ್ಕಾರ ಬಿದ್ದು ಹಂಗಾಮಿ ಸರ್ಕಾರವೊಂದು ನಿರ್ಮಾಣವಾಗುತ್ತದೆ.ಹಂಗಾಮಿ ಪ್ರಧಾನಿಯವರು ಅಣ್ವಸ್ತ್ರ ಪ್ರಯೋಗಿಸಲು ಭದ್ರತಾ ಪಡೆಗಳಿಗೆ ಅನುಮತಿ ನೀಡುತ್ತಾರೆ.ಆದರೆ ಎಲೆಕ್ಷನ್ ಕಮಿಷನ್ ಹಂಗಾಮಿ ಸರ್ಕಾರ ಚುನಾವಣ ನೀತಿ ಸಂಹಿತೆಯ ಉಲ್ಲಂಘನೆ ಮಾಡಿದೆ ಎಂದು ಸರ್ವೋಚ್ಹ ನ್ಯಾಯಾಲಯದ ಮೆಟ್ಟಿಲೇರುತ್ತದೆ. ನ್ಯಾಯಾಲಯ ಸರ್ಕಾರದ ಪರ ತೀರ್ಪು ನೀಡುತ್ತದೆ.

ಅಷ್ಟರಲ್ಲಿ ಪಾಕಿಗಳು ಒಂದು ಮಿಸೈಲ್ ಹಾರಿಸಿಯೇ ಬಿಡುತ್ತಾರೆ, ಆದರೆ ಅದು ಇಸ್ಲಾಮಾಬಾದ್ನಲ್ಲೆ ಸರ್ಕಾರಿ ಕಟ್ಟಡದ ಮೇಲೆ ಬೀಳುತ್ತದೆ Eye-wink

ಆದರೆ ಹಠ ಬಿಡದ ಪಾಕಿಗಳು ಮತ್ತೆ ಮತ್ತೆ ಪ್ರಯತ್ನಿಸಿ ವಿಫಲರಾಗಿ ಈ ಬಾರಿ 'Made in China' ಮಿಸೈಲ್ನ ಹಣೆ ಬರಹವೇ ಇಷ್ಟು ಎಂದು, ಅದನ್ನು ಬಿಟ್ಟು 'Made in USA' ಮಿಸೈಲ್ ಬಳಸಲು ತೀರ್ಮಾನಿಸುತ್ತಾರೆ.

ಇತ್ತ ಭಾರತದ ಸೇನೆ ಸರ್ಕಾರದ ಆಜ್ಞೆಗೆ ಕಾದ ೩ ತಿಂಗಳ ಬಳಿಕ, ಸರ್ಕಾರದ ಆದೇಶದ ಮೇರೆಗೆ ಸ್ವ-ನಿರ್ಮಿತ ಮಿಸೈಲ್ ಅನ್ನು ಹಾರಿಸಲು ನಿರ್ಧರಿಸುತ್ತದೆ. ಅಷ್ಟರಲ್ಲಿ ದೇಶಾದ್ಯಂತ ಅಣ್ವಸ್ತ್ರ ಪ್ರಯೋಗದ ವಿರುದ್ದ ಪ್ರತಿಭಟನೆ ನಡೆಯುತ್ತದೆ.

ಈ ನಡುವೆ ಪಾಕಿಗಳು 'ಕಳ್ಳ ಸಾಗಣೆ'ಯಲ್ಲಿ ತಂದ 'Made in USA' ಮಿಸೈಲ್ ಅನ್ನು ಪ್ರಯೋಗಿಸಲು ಹೊರಡುತ್ತಾರೆ, ಅವರಿಗೆ ಅಮೇರಿಕಾದವರು ಬರೆದ ಸಾಫ್ಟವೇರ್ ಅರ್ಥವಾಗುವುದಿಲ್ಲವಾದರು ಹಾರಿಸಿಯೇ ಬಿಡುತ್ತಾರೆ, ಆದರೆ ಆ ಮಿಸೈಲ್ ಭಾರತ ಕಡೆ ನುಗ್ಗುವುದು ಬಿಟ್ಟು ಅದರ ನಿಜವಾದ ಗುರಿಯ ಕಡೆ ನುಗ್ಗುತ್ತದೆ Eye-wink

ಗುರಿ : ರಷ್ಯಾ !!!

ರಷ್ಯಾ, ಪಾಕಿಗಳು ಹಾರಿಸಿದ ಮಿಸೈಲ್ ಅನ್ನು ಕ್ಷಣಾರ್ದದಲ್ಲಿ ಹೊಡೆದುರುಳಿಸಿ, ಪ್ರತಿಯಾಗಿ ತಾವು ಮಿಸೈಲ್ ಹಾರಿಸುತ್ತಾರೆ. ಪಾಕಿಸ್ತಾನ ದ್ವಂಸವಾಗಿ, ಸಹಾಯಕ್ಕಾಗಿ ವಿಶ್ವದ ಮೊರೆಯಿಡುತ್ತದೆ.

ತಕ್ಷಣ ಎಚ್ಚೆತ್ತ ಭಾರತ ಪಾಕಿಗಳಿಗೆ ಕಂಬನಿ ಮಿಡಿದು, ಮಿಲಿಯನ್ ಡಾಲರ್ನಷ್ಟು ಪಾರ್ಲೆ-ಜಿ ಬಿಸ್ಕೆಟ್ಗಳನ್ನೂ ಕಳಿಸಿಕೊಡುತ್ತದೆ.

ಹಾಗೆ ಭಾರತ ಅಣ್ವಸ್ತ್ರವನ್ನು ಬಳಸದೆ ಶಾಂತಿಯಿಂದಲೇ ಯುದ್ಧವನ್ನು ಗೆದ್ದು ಬಿಡುತ್ತದೆ!!!

- ರಾಕೇಶ್ ಶೆಟ್ಟಿ Smiling

Monday, March 23, 2009

ಈ ದಿನದ ವಿಶೇಷ ಗೊತ್ತ - ೨ ?



ಇಂದಿಗೆ ಆ ಮಹಾನ್ ಚೇತನಗಳು ಆತ್ಮಾರ್ಪಣೆ ಮಾಡಿ ೭೮ ವರ್ಷಗಳಾಯಿತು. 'ಭಗತ್ ಸಿಂಗ್, ಸುಖ್ ದೇವ್,ರಾಜ್ ಗುರು' ಎಂಬ ೩ ಯುವಕರು, ನಿಜವಾದ ಕ್ರಾಂತಿಕಾರಿಗಳು ಎಂದರೆ ಕೇವಲ ಆವೇಶದಲ್ಲಿ ಶಸ್ತ್ರ ಹಿಡಿದವರಲ್ಲ ಎಂದು ತೋರಿಸಿ, ದೇಶದ ಪ್ರತಿಯೊಬ್ಬರಲ್ಲು 'ಸ್ವಾತಂತ್ಯ್ರದ ಕಿಡಿ'ಯನ್ನು ಹೊತ್ತಿಸಿದರು.


मरके कैसे जीते है
इस दुनिया को बतलाने
तेरे लाल चले है माहे
अब तेरे लाज बचा ने ||

ಮೇಲಿನ ಈ ೪ ಸಾಲುಗಳಲ್ಲೇ ಅವರ ನಿರ್ಧಾರ ಎಷ್ಟು ಅಚಲವಾಗಿತ್ತು ಎಂಬುದು ತಿಳಿಯುತ್ತದೆ.೨೦ ರ ಆಸುಪಾಸಿನಲ್ಲೇ 'ಸರ್ವ ಧರ್ಮ ಸಮನ್ವಯ' ದ ಕನಸು ಕಂಡ, ಸ್ವತಂತ್ರ ಭಾರತ ಹೇಗಿರಬೇಕು ಎಂಬ ದೂರದೃಷ್ಟಿಯಿದ್ದ ಭಗತ ಸಿಂಗ್ ರಂತವರು ಎಂದಿಗೂ ಜನಮಾನಸದಲ್ಲಿ ಅಮರಾಗಿರುತ್ತಾರೆ.

ಇಂಕ್ವಿಲಾಬ್ ಜಿನ್ದಾಬಾದ್

(ಚಿತ್ರ ಕೃಪೆ :midhun.allubrothers.com)

Saturday, February 14, 2009

ಫೆಬ್ರವರಿ 14 : ಅದ್ಯರಾ ದಿನವೋ?

ಮೂರು options ಇದೆ, ಯಾವುದು ಒಳ್ಳೇದು ಅನ್ನಿಸುತ್ತೋ ಅದೇ ತಗೊಳ್ಳಿ.

೧.'ಪಬ್ ಭರೋ' ಚಳುವಳಿ

೨.'ಸಾಮೂಹಿಕ ಪ್ರೇಮಿಗಳ ದಿನಾಚರಣೆ'

೩.'ರಾಖಿ ಕಟ್ಟಿ ಇಲ್ಲ ತಾಳಿ ಕಟ್ಟಿ'

ಬಹುಷಃ ನಮ್ಮ ಸ್ವಾತಂತ್ರದ ಸುವರ್ಣ ಮಹೋತ್ಸವಕ್ಕೂ ಯಾರು ಇಷ್ಟೊಂದು ತಲೆ ಕೆಡಿಸಿಕೊಂಡು ಕಾರ್ಯಕ್ರಮಗಳನ್ನ ರೂಪಿಸಿರಲಿಲ್ಲ ಅನ್ನಿಸುತ್ತೆ.ಈ ಮೇಲಿನ ಮೂರು ಆಪ್ಶನ್ಗಳು ಪ್ರೇಮಿಗಳ ದಿನಕ್ಕಾಗಿ. ಬೆಂಗಳೂರಿನ ಮಟ್ಟಿಗೆ ಹೇಳುವದಾದರೆ ಈ ಎಲ್ಲ ಮಹಾನ್ ಚಳುವಳಿಗಳು 'ಮಹಾತ್ಮ ಗಾಂಧೀ' ರಸ್ತೆಯಲ್ಲೇ ನಡೆಯಬಹುದು ಅನ್ನಿಸುತ್ತೆ.

ಮೊದಲಿಗೆ ಮಾನ್ಯ ಮಹಿಳಾ ಕಲ್ಯಾಣ (?) ಸಚಿವೆ ರೇಣುಕಮ್ಮ ಪ್ರಾಯೋಜಿತ 'ಪಬ್ ಭರೋ' ಚಳುವಳಿಯಲ್ಲಿ ತೇಲಾಡಿಕೊಂಡು "ಕುಡಿಯೋದೆ ನನ್ನ ವೀಕ್ನೆಸ್ಸು" ಅಂತಾ ಹಾಡ್ಕೊಂಡು ಪಬ್ಬಿನ ಮಬ್ಬಿನಿಂದ ಹೊರ ಬಂದು ಪ್ರಗತಿಪರರಿಂದ ಒಂದು ಉಚಿತ 'ಕೆಂಪುಗುಲಾಬಿ' ಪಡೆದು "ಈ ಗುಲಾಬಿ ಹೂ ನಿನಗಾಗಿ ಇದು ಚೆಲ್ಲುವ ಪರಿಮಳ ನಿನಗಾಗಿ" ಅಂತ ಹಾಡ್ತಾ ಯಾವುದಾದರು ಹುಡುಗಿಯ ಜೊತೆ ಪಾರ್ಕಿಗೋ ಅಥವಾ ಇನ್ನೆಲೋ ಹೊರಟರೆ, ಅಲ್ಲಿಗೆ ಶ್ರೀರಾಮ ಸೇನೆಯವರು ಎಂಟ್ರಿ ಹಾಕಿ "ಸಪ್ತ ಪದಿ, ಇದು ಸಪ್ತ ಪದಿ" ಅಥವಾ "ಅಣ್ಣ ತಂಗಿಯರ ಈ ಬಂಧ" ಅಂತ ಹಾಡಿಸ್ತಾರೆ.

ಈ ಎಲ್ಲ ಮಹಾನ್ ಹೋರಾಟಗಳ ನಡುವೆ ಇನ್ನು ಕೆಲವರು ರಾಮಸೆನೆಯವರಿಗೆ ಕೊಡಲು 'ಪಿಂಕ್ ಚಡ್ಡಿ' ಸಂಗ್ರಹಿಸುತಿದ್ದಾರೆ.ಅದಕ್ಕೋಸ್ಕರವೇ ಒಂದು ಪ್ರತ್ಯೇಕ ಬ್ಲಾಗ್ ಸಹ ಶುರು ಮಾಡಿದ್ದಾರೆ.ಒಂದು ವಿಕೃತಿಯನ್ನು ವಿರೋಧಿಸಲು ಎಷ್ಟೆಲ್ಲ ವಿಕೃತಿಗಳು.

ಇವಿಷ್ಟು ಅನಾಹುತವನ್ನು ತನ್ನ ನಾಮಧೇಯದ ರಸ್ತೆಯಲ್ಲೇ ನೋಡುವ ಮಹಾತ್ಮ 'ಒಹ್! ನನ್ನ ಸ್ವತಂತ್ರ ಭಾರತವೇ' ಅಂತ ಕಂಬನಿ ಮಿಡಿಯುವುದಿಲ್ಲವೆ?