Wednesday, December 3, 2008

ಉಗ್ರರಿಂದ ಬಂದ ಬುಲೆಟ್ ಎದುರಿಗಿದ್ದವನ ಧರ್ಮ ಕೇಳಿ ಒಳ ನುಗ್ಗಿತ್ತಾ?

"ಸಾಮಾನ್ಯವಾಗಿ ಎಲ್ಲರೂ ಬದುಕಿ ಸಾಯುತ್ತಾರೆ, ಆದರೆ ಇವರು ಸತ್ತು ಬದುಕಿದ್ದಾರೆ"
ಈ ಮಾತನ್ನು ನಾನು ಹೇಳಿದ್ದು, ನಿನ್ನೆ ಭಾರತವನ್ನು ಬೆಚ್ಚಿ ಬೀಳಿಸಿದ ಮುಂಬೈನ ಮಾರಣ ಹೋಮದಲ್ಲಿ ವೀರ ಮರಣವನ್ನಪ್ಪಿದ, ನಮ್ಮ ನಾಳೆಗಳಿಗೆ ಅವರ ಅಮೂಲ್ಯ ಜೀವವನ್ನು ಮುಡಿಪಿಟ್ಟು ಹುತಾತ್ಮರಾದ 'ಹೇಮಂತ್ ಕರ್ಕರೆ, ವಿಜಯ್ ಸಾಲಸ್ಕರ್, ಅಶೋಕ್ ಆಪ್ಟೆ ಹಾಗೂ ಪೋಲಿಸ್ ಮತ್ತು ವೀರ ಯೋಧ'ರ ಬಗ್ಗೆ.

ಮುಂಬೈ ಮಾರಣ ಹೋಮದ ವಿಷಯ ತಿಳಿದು ಒಂದು ಕ್ಷಣ ಬೆಚ್ಚಿ ಬಿದ್ದೆ, ಎಲ್ಲೆಲ್ಲೂ ಕೇಳಿ ಬಂದ ಸುದ್ದಿ ಮುಂಬೈನ ಬಗ್ಗೆಯೇ. ಆದರೆ ಅದಕ್ಕಿಂತ ಹಿಂಸೆ ಎನಿಸಿದ್ದು ಅಲ್ಲೂ ಧರ್ಮದ ವಿಷಯ ಇಣುಕಿ ಬಂತು ನೋಡಿ ಆವಾಗ. ಉಗ್ರರು ಅಷ್ಟು ರಾಜರೋಷವಾಗಿ ಮುಂಬೈಗೆ ಬಂದಿದ್ದಾರು ಹೇಗೆ ಅಂತ ನೋಡಿದರೆ ಅವರು ಬಂದಿದ್ದು ಜಲ ಮಾರ್ಗದಲ್ಲಿ ಅಂತ ಪೋಲಿಸ್ ಮೂಲಗಳು ಹೇಳಿದ್ದು, ಅದಕ್ಕೆ ಬರುತಿದ್ದ ಪ್ರತಿಕ್ರಿಯೆಗಳನ್ನೂ ನೋಡಬೇಕು, ಅಬ್ಬಾ!!

ಒಂದು ಕಡೆ ಎ.ಟಿ.ಎಸ್ ನವರು ಕೈ ತೊಳೆದುಕೊಂಡು ಕೇವಲ ಮಾಲೆಗಾವ್ ಸ್ಪೋಟದ ಆರೋಪಿಗಳ ಹಿಂದೆಯೇ ಬಿದ್ದಿದ್ದರು, ಅದಕ್ಕೆ ಅವರಿಗೆ ಉಗ್ರರ ಜಾಡು ತಿಳಿಯಲಿಲ್ಲ ಎಂಬ ರೀತಿಯ ಮಾತುಗಳು ಬಂದರೆ,
ಮತ್ತೊಂದು ಕಡೆ ಕೆಲವು ಮಾಧ್ಯಮಗಳಲ್ಲಿ ಉಗ್ರರ ಫೋಟೋ ತೆಗೆದಿದ್ದರಲ್ಲಾ ಅದರ ಆಧಾರದಲ್ಲಿ ಉಗ್ರರ ಮೂಲ ಪತ್ತೆ ಮಾಡುವ ಬದಲು, ಉಗ್ರರ ಧರ್ಮವನ್ನು ಪತ್ತೆ ಹಚ್ಚುವಂತ ಕೆಲಸ ನಡೆಯ್ತುತಿತ್ತು.

ಅಲ್ಲ ಸ್ವಾಮಿ, ಇಂತ ಸಂದಿಗ್ದ ಸಮಯದಲ್ಲೂ ಈ ಧರ್ಮವನ್ನು ಮದ್ಯೆ ಎಳೆದು ತರುವ ರಾಜಕಾರಣಿಗಳು,ವಿಚಾರವಾದಿಗಳು,ಬುದ್ದಿಜೀವಿಗಳು,ಕೋಮುವಾದಿಗಳಿಗೆ ಮನುಷ್ಯತ್ವ ಅನ್ನುವುದು ಇದೆಯಾ ಅಥವಾ ಅವರುಗಳಿಗೆ ಆ ಪದದ ಅರ್ಥವಾದರೂ ತಿಳಿದಿದೆಯಾ ಅನ್ನಿಸುತ್ತೆ. ಸತ್ತವನ ರಕ್ತದಲ್ಲಿ ಅವನ ಧರ್ಮ ಕಾಣುತ್ತಾ? ಉಗ್ರರಿಂದ ಬಂದ ಬುಲೆಟ್ ಎದುರಿಗಿದ್ದವನ ಧರ್ಮ ಕೇಳಿ ಒಳ ನುಗ್ಗಿತ್ತಾ?
ಭಾವನಾತ್ಮಕ ವಿಷಯಗಳಲ್ಲಿ ತಮ್ಮ ಬೆಳೆ ಬೇಯಿಸಿಕೊಳ್ಳುವ ಇಂತ ಜನರನ್ನು ದೂರವಿಡದಿದ್ದರೆ, ಭಾರತ ಭಾರತವಾಗಿ ಉಳಿಯುವುದೇ ಇಲ್ಲ.

ಸಂಸತ್ ದಾಳಿಯ ಸೂತ್ರಧಾರನನ್ನು ಹಿಡಿದು ತಂದರೆ , ಚಿಲ್ಲರೆ ವೋಟುಗಳಿಗಾಗಿ ಆಫ್ಜ್ಯಲ್ ಅನ್ನು ಇನ್ನೂ ಜೀವಂತವಾಗಿಟ್ಟಿದ್ದಾರೆ. ಇಂತವರಿಗೆ ಯಾವುದರಲ್ಲಿ ಹೊಡೆಯಬೇಕು?
ಮೊನ್ನೆ ಮೊನ್ನೆ ತಾನೆ ಗುಜರಾತಿನಲ್ಲಿ ನಡೆದ ಸ್ಪೋಟದ ತನಿಖೆ ವೇಳೆ ಪೋಲಿಸ್ ಎನ್ ಕೌಂಟರ್ನಲ್ಲಿ ಉಗ್ರರ ಹತ್ಯೆಮಾಡಲಾಗಿತ್ತು. ಆಗ ಅದೆಲ್ಲಿಂದ ಎದ್ದು ಬಂದನೋ ಈ ಅಮರ್ ಸಿಂಗ್ , ಅವನಿಗೆ ಅಲ್ಲಿ ಹುತಾತ್ಮರಾದ ಪೋಲಿಸ್ ಅಧಿಕಾರಿಯ ಬಗ್ಗೆ ಏನು ಅನ್ನಿಸುವುದಿಲ್ಲ, ಆದರೆ ಹತರಾದ ಉಗ್ರರ ಬಗ್ಗೆ ಸಿಂಪತಿ ತೋರಿಸುತ್ತಾನೆ?
ಶಂಕಿತ ಉಗ್ರರನ್ನು ಪೊಲೀಸರು ಸೆರೆ ಹಿಡಿದು ತಂದರೆ ಅಲ್ಲೂ ಧರ್ಮವನ್ನು ಎಳೆದು ತಂದವರು ಲಾಲೂ, ಪಾಸ್ವಾನ್ ತರದ ಕೆಟ್ಟ ಜನ . ಬ್ರೂಕರ್ ವಿಜೇತೆ ಅರುನ್ದತಿಗೂ ಪೊಲೀಸರ ಮೇಲೆಯೇ ಸಂಶಯ ಬರುತ್ತೆ.
ಇನ್ನು ಮಾಲೆಗಾವ್ ಆರೋಪಿಗಳು ಸಿಕ್ಕಿದಾಗಲಂತೂ ಇವರಿಗೆಲ್ಲ ಹಬ್ಬವೇ, ಯಾವನೋ ತಲೆ ಮಾಸಿದವ ಮಾಡಿದ ತಪ್ಪಿಗೆ ಒಂದಿಡಿ ಧರ್ಮವನ್ನು ತಂದುಬಿಡುವುದೇ? ಅಡ್ವಾಣಿ ಹಾಗೂ ಕೆಲವರಂತೂ ಎ.ಟಿ.ಎಸ್ ನವರ ಕಮಿಟ್ಮೆಂಟ್ ಬಗ್ಗೆಯೇ ಮಾತನಾಡುತ್ತಾರೆ? ಕಮಿಟ್ಮೆಂಟ್ ಇಲ್ಲದ ಅಧಿಕಾರಿಯಾಗಿದ್ದರೆ ಹೇಮಂತ್
ಅವರಂತಹ ಹಿರಿಯ ಅಧಿಕಾರಿ ಬಲಿಯಾಗುತಿದ್ದರೆ?

" ನನ್ನನ್ನು 'ಚಕಮಕಿ ಚತುರ' ಅನ್ನಬೇಡಿ ಹಾಗೆ ಹೇಳಿದರೆ, ಇವನಿಗೆ ಎನ್ಕೌಂಟರ್ ಮಾಡುವುದೇ ಹವ್ಯಾಸ ಅಂತ ಮಾನವ ಹಕ್ಕು ಆಯೋಗದವರು ನನ್ನ ಹಿಂದೆ ಬೀಳುತ್ತಾರೆ" ಅಂತ ಹೇಳಿದ್ದು , ಮೊನ್ನೆ ಹುತಾತ್ಮರಾದ ವಿಜಯ್ ಸಾಲಸ್ಕರ್ ಅವರು, ಅವರ ಹೇಳಿಕೆಯನ್ನು ಗಮನಿಸಿದರೆ ನಮ್ಮ ದೇಶದಲ್ಲಿ ಇಂತ ಅಧಿಕಾರಿಗಳು ಎಷ್ಟು ಒತ್ತಡದ ನಡುವೆ ಕೆಲಸ ಮಾಡುತ್ತಾರೆ ತಿಳಿಯುತ್ತದೆ.

'ಇನ್ನು ಮುಂದೆ ಎಚ್ಚರ ವಹಿಸಲಾಗುತ್ತದೆ, ಇಂತ ವಿದ್ವಂಸಕ ಕೃತ್ಯಗಳಿಗೆ ಅವಕಾಶ ನೀಡುವುದಿಲ್ಲ ' ಅಂತ ಶಿವರಾಜ್ ಪಾಟೀಲರು ಭಾಷಣ ಮಾಡಿದ್ದೆ ಬಂತು, ಇಂಟೆಲಿಜೆನ್ಸ್ ಅನ್ನು ದೇಶದ ವೈರಿಗಳ ಚಲನ ವಲನದ ಮೇಲೆ ಕಣ್ಣಿಡಲು ಬಳಸುವುದನ್ನು ಬಿಟ್ಟು ವೀರೋಧ ಪಕ್ಷದ ನಾಯಕರ ಹಿಂದೆ ಬಿಟ್ಟರೆ, ಇಂಟೆಲಿಜೆನ್ಸ್ ಫೈಲ್ ಆಗದೆ ಇರುತ್ತಾ?

ಉರಿವ ಚಿತೆಯಲ್ಲೂ ಚಳಿ ಕಾಯಿಸಿ ಕೊಳ್ಳುವ ಜನ ಇವರು.

ತಮ್ಮ ಪ್ರಾಣವನ್ನು ಪಣಕಿಟ್ಟು ಉಗ್ರರೊಡನೆ ಹೋರಾಡುವ ಯೋಧರ ಬಗ್ಗೆ ಯೋಚಿಸುವುದು ಬೇಡವೇ, ಅವರಿಗೂ ನಮ್ಮಂತೆಯೇ ತಂದೆ,ತಾಯಿ,ಹೆಂಡತಿ,ಮಕ್ಕಳು ,ಅಕ್ಕ ತಂಗಿ,ತಮ್ಮ,ಅಣ್ಣ ಎಲ್ಲ ಇರುತ್ತಾರೆ, ಅವರು ಮನುಷ್ಯರೇ ಅಲ್ಲವೇ?

ಉಗ್ರರ ಅಟ್ಟಹಾಸಕ್ಕೆ ಬಲಿಯಾದ ಮುಗ್ದ ಜೀವಗಳಿಗೆ ಹಾಗೂ ಮಹಾನ್ ಅಧಿಕಾರಿಗಳಿಗೆ, ಯೋಧರಿಗೆ ನನ್ನ ನುಡಿ ನಮನ.