Wednesday, December 3, 2008

ಉಗ್ರರಿಂದ ಬಂದ ಬುಲೆಟ್ ಎದುರಿಗಿದ್ದವನ ಧರ್ಮ ಕೇಳಿ ಒಳ ನುಗ್ಗಿತ್ತಾ?

"ಸಾಮಾನ್ಯವಾಗಿ ಎಲ್ಲರೂ ಬದುಕಿ ಸಾಯುತ್ತಾರೆ, ಆದರೆ ಇವರು ಸತ್ತು ಬದುಕಿದ್ದಾರೆ"
ಈ ಮಾತನ್ನು ನಾನು ಹೇಳಿದ್ದು, ನಿನ್ನೆ ಭಾರತವನ್ನು ಬೆಚ್ಚಿ ಬೀಳಿಸಿದ ಮುಂಬೈನ ಮಾರಣ ಹೋಮದಲ್ಲಿ ವೀರ ಮರಣವನ್ನಪ್ಪಿದ, ನಮ್ಮ ನಾಳೆಗಳಿಗೆ ಅವರ ಅಮೂಲ್ಯ ಜೀವವನ್ನು ಮುಡಿಪಿಟ್ಟು ಹುತಾತ್ಮರಾದ 'ಹೇಮಂತ್ ಕರ್ಕರೆ, ವಿಜಯ್ ಸಾಲಸ್ಕರ್, ಅಶೋಕ್ ಆಪ್ಟೆ ಹಾಗೂ ಪೋಲಿಸ್ ಮತ್ತು ವೀರ ಯೋಧ'ರ ಬಗ್ಗೆ.

ಮುಂಬೈ ಮಾರಣ ಹೋಮದ ವಿಷಯ ತಿಳಿದು ಒಂದು ಕ್ಷಣ ಬೆಚ್ಚಿ ಬಿದ್ದೆ, ಎಲ್ಲೆಲ್ಲೂ ಕೇಳಿ ಬಂದ ಸುದ್ದಿ ಮುಂಬೈನ ಬಗ್ಗೆಯೇ. ಆದರೆ ಅದಕ್ಕಿಂತ ಹಿಂಸೆ ಎನಿಸಿದ್ದು ಅಲ್ಲೂ ಧರ್ಮದ ವಿಷಯ ಇಣುಕಿ ಬಂತು ನೋಡಿ ಆವಾಗ. ಉಗ್ರರು ಅಷ್ಟು ರಾಜರೋಷವಾಗಿ ಮುಂಬೈಗೆ ಬಂದಿದ್ದಾರು ಹೇಗೆ ಅಂತ ನೋಡಿದರೆ ಅವರು ಬಂದಿದ್ದು ಜಲ ಮಾರ್ಗದಲ್ಲಿ ಅಂತ ಪೋಲಿಸ್ ಮೂಲಗಳು ಹೇಳಿದ್ದು, ಅದಕ್ಕೆ ಬರುತಿದ್ದ ಪ್ರತಿಕ್ರಿಯೆಗಳನ್ನೂ ನೋಡಬೇಕು, ಅಬ್ಬಾ!!

ಒಂದು ಕಡೆ ಎ.ಟಿ.ಎಸ್ ನವರು ಕೈ ತೊಳೆದುಕೊಂಡು ಕೇವಲ ಮಾಲೆಗಾವ್ ಸ್ಪೋಟದ ಆರೋಪಿಗಳ ಹಿಂದೆಯೇ ಬಿದ್ದಿದ್ದರು, ಅದಕ್ಕೆ ಅವರಿಗೆ ಉಗ್ರರ ಜಾಡು ತಿಳಿಯಲಿಲ್ಲ ಎಂಬ ರೀತಿಯ ಮಾತುಗಳು ಬಂದರೆ,
ಮತ್ತೊಂದು ಕಡೆ ಕೆಲವು ಮಾಧ್ಯಮಗಳಲ್ಲಿ ಉಗ್ರರ ಫೋಟೋ ತೆಗೆದಿದ್ದರಲ್ಲಾ ಅದರ ಆಧಾರದಲ್ಲಿ ಉಗ್ರರ ಮೂಲ ಪತ್ತೆ ಮಾಡುವ ಬದಲು, ಉಗ್ರರ ಧರ್ಮವನ್ನು ಪತ್ತೆ ಹಚ್ಚುವಂತ ಕೆಲಸ ನಡೆಯ್ತುತಿತ್ತು.

ಅಲ್ಲ ಸ್ವಾಮಿ, ಇಂತ ಸಂದಿಗ್ದ ಸಮಯದಲ್ಲೂ ಈ ಧರ್ಮವನ್ನು ಮದ್ಯೆ ಎಳೆದು ತರುವ ರಾಜಕಾರಣಿಗಳು,ವಿಚಾರವಾದಿಗಳು,ಬುದ್ದಿಜೀವಿಗಳು,ಕೋಮುವಾದಿಗಳಿಗೆ ಮನುಷ್ಯತ್ವ ಅನ್ನುವುದು ಇದೆಯಾ ಅಥವಾ ಅವರುಗಳಿಗೆ ಆ ಪದದ ಅರ್ಥವಾದರೂ ತಿಳಿದಿದೆಯಾ ಅನ್ನಿಸುತ್ತೆ. ಸತ್ತವನ ರಕ್ತದಲ್ಲಿ ಅವನ ಧರ್ಮ ಕಾಣುತ್ತಾ? ಉಗ್ರರಿಂದ ಬಂದ ಬುಲೆಟ್ ಎದುರಿಗಿದ್ದವನ ಧರ್ಮ ಕೇಳಿ ಒಳ ನುಗ್ಗಿತ್ತಾ?
ಭಾವನಾತ್ಮಕ ವಿಷಯಗಳಲ್ಲಿ ತಮ್ಮ ಬೆಳೆ ಬೇಯಿಸಿಕೊಳ್ಳುವ ಇಂತ ಜನರನ್ನು ದೂರವಿಡದಿದ್ದರೆ, ಭಾರತ ಭಾರತವಾಗಿ ಉಳಿಯುವುದೇ ಇಲ್ಲ.

ಸಂಸತ್ ದಾಳಿಯ ಸೂತ್ರಧಾರನನ್ನು ಹಿಡಿದು ತಂದರೆ , ಚಿಲ್ಲರೆ ವೋಟುಗಳಿಗಾಗಿ ಆಫ್ಜ್ಯಲ್ ಅನ್ನು ಇನ್ನೂ ಜೀವಂತವಾಗಿಟ್ಟಿದ್ದಾರೆ. ಇಂತವರಿಗೆ ಯಾವುದರಲ್ಲಿ ಹೊಡೆಯಬೇಕು?
ಮೊನ್ನೆ ಮೊನ್ನೆ ತಾನೆ ಗುಜರಾತಿನಲ್ಲಿ ನಡೆದ ಸ್ಪೋಟದ ತನಿಖೆ ವೇಳೆ ಪೋಲಿಸ್ ಎನ್ ಕೌಂಟರ್ನಲ್ಲಿ ಉಗ್ರರ ಹತ್ಯೆಮಾಡಲಾಗಿತ್ತು. ಆಗ ಅದೆಲ್ಲಿಂದ ಎದ್ದು ಬಂದನೋ ಈ ಅಮರ್ ಸಿಂಗ್ , ಅವನಿಗೆ ಅಲ್ಲಿ ಹುತಾತ್ಮರಾದ ಪೋಲಿಸ್ ಅಧಿಕಾರಿಯ ಬಗ್ಗೆ ಏನು ಅನ್ನಿಸುವುದಿಲ್ಲ, ಆದರೆ ಹತರಾದ ಉಗ್ರರ ಬಗ್ಗೆ ಸಿಂಪತಿ ತೋರಿಸುತ್ತಾನೆ?
ಶಂಕಿತ ಉಗ್ರರನ್ನು ಪೊಲೀಸರು ಸೆರೆ ಹಿಡಿದು ತಂದರೆ ಅಲ್ಲೂ ಧರ್ಮವನ್ನು ಎಳೆದು ತಂದವರು ಲಾಲೂ, ಪಾಸ್ವಾನ್ ತರದ ಕೆಟ್ಟ ಜನ . ಬ್ರೂಕರ್ ವಿಜೇತೆ ಅರುನ್ದತಿಗೂ ಪೊಲೀಸರ ಮೇಲೆಯೇ ಸಂಶಯ ಬರುತ್ತೆ.
ಇನ್ನು ಮಾಲೆಗಾವ್ ಆರೋಪಿಗಳು ಸಿಕ್ಕಿದಾಗಲಂತೂ ಇವರಿಗೆಲ್ಲ ಹಬ್ಬವೇ, ಯಾವನೋ ತಲೆ ಮಾಸಿದವ ಮಾಡಿದ ತಪ್ಪಿಗೆ ಒಂದಿಡಿ ಧರ್ಮವನ್ನು ತಂದುಬಿಡುವುದೇ? ಅಡ್ವಾಣಿ ಹಾಗೂ ಕೆಲವರಂತೂ ಎ.ಟಿ.ಎಸ್ ನವರ ಕಮಿಟ್ಮೆಂಟ್ ಬಗ್ಗೆಯೇ ಮಾತನಾಡುತ್ತಾರೆ? ಕಮಿಟ್ಮೆಂಟ್ ಇಲ್ಲದ ಅಧಿಕಾರಿಯಾಗಿದ್ದರೆ ಹೇಮಂತ್
ಅವರಂತಹ ಹಿರಿಯ ಅಧಿಕಾರಿ ಬಲಿಯಾಗುತಿದ್ದರೆ?

" ನನ್ನನ್ನು 'ಚಕಮಕಿ ಚತುರ' ಅನ್ನಬೇಡಿ ಹಾಗೆ ಹೇಳಿದರೆ, ಇವನಿಗೆ ಎನ್ಕೌಂಟರ್ ಮಾಡುವುದೇ ಹವ್ಯಾಸ ಅಂತ ಮಾನವ ಹಕ್ಕು ಆಯೋಗದವರು ನನ್ನ ಹಿಂದೆ ಬೀಳುತ್ತಾರೆ" ಅಂತ ಹೇಳಿದ್ದು , ಮೊನ್ನೆ ಹುತಾತ್ಮರಾದ ವಿಜಯ್ ಸಾಲಸ್ಕರ್ ಅವರು, ಅವರ ಹೇಳಿಕೆಯನ್ನು ಗಮನಿಸಿದರೆ ನಮ್ಮ ದೇಶದಲ್ಲಿ ಇಂತ ಅಧಿಕಾರಿಗಳು ಎಷ್ಟು ಒತ್ತಡದ ನಡುವೆ ಕೆಲಸ ಮಾಡುತ್ತಾರೆ ತಿಳಿಯುತ್ತದೆ.

'ಇನ್ನು ಮುಂದೆ ಎಚ್ಚರ ವಹಿಸಲಾಗುತ್ತದೆ, ಇಂತ ವಿದ್ವಂಸಕ ಕೃತ್ಯಗಳಿಗೆ ಅವಕಾಶ ನೀಡುವುದಿಲ್ಲ ' ಅಂತ ಶಿವರಾಜ್ ಪಾಟೀಲರು ಭಾಷಣ ಮಾಡಿದ್ದೆ ಬಂತು, ಇಂಟೆಲಿಜೆನ್ಸ್ ಅನ್ನು ದೇಶದ ವೈರಿಗಳ ಚಲನ ವಲನದ ಮೇಲೆ ಕಣ್ಣಿಡಲು ಬಳಸುವುದನ್ನು ಬಿಟ್ಟು ವೀರೋಧ ಪಕ್ಷದ ನಾಯಕರ ಹಿಂದೆ ಬಿಟ್ಟರೆ, ಇಂಟೆಲಿಜೆನ್ಸ್ ಫೈಲ್ ಆಗದೆ ಇರುತ್ತಾ?

ಉರಿವ ಚಿತೆಯಲ್ಲೂ ಚಳಿ ಕಾಯಿಸಿ ಕೊಳ್ಳುವ ಜನ ಇವರು.

ತಮ್ಮ ಪ್ರಾಣವನ್ನು ಪಣಕಿಟ್ಟು ಉಗ್ರರೊಡನೆ ಹೋರಾಡುವ ಯೋಧರ ಬಗ್ಗೆ ಯೋಚಿಸುವುದು ಬೇಡವೇ, ಅವರಿಗೂ ನಮ್ಮಂತೆಯೇ ತಂದೆ,ತಾಯಿ,ಹೆಂಡತಿ,ಮಕ್ಕಳು ,ಅಕ್ಕ ತಂಗಿ,ತಮ್ಮ,ಅಣ್ಣ ಎಲ್ಲ ಇರುತ್ತಾರೆ, ಅವರು ಮನುಷ್ಯರೇ ಅಲ್ಲವೇ?

ಉಗ್ರರ ಅಟ್ಟಹಾಸಕ್ಕೆ ಬಲಿಯಾದ ಮುಗ್ದ ಜೀವಗಳಿಗೆ ಹಾಗೂ ಮಹಾನ್ ಅಧಿಕಾರಿಗಳಿಗೆ, ಯೋಧರಿಗೆ ನನ್ನ ನುಡಿ ನಮನ.

Tuesday, November 18, 2008

ಕುಮಾರನ ಪಟ್ಟಾಭಿಷೇಕ.. ಬೆಂಗಳೂರಿಗರಿಗೆ ತಾಕಿದ ಶಾಖ...

ಇವ್ರಿಗೆ ಬೇರೆ ಎಲ್ಲೂ ಜಾಗ ಸಿಗಲಿಲ್ಲವಾ? ಬೆಂಗಳೂರೇ ಬೇಕಾ? ಅದರಲ್ಲೂ ನಗರದ ನಟ್ಟ ನಡುವೆ ಈ ರೀತಿಯ ಒಂದು ಸಮಾರಂಭ ಬೇಕಾ? ಇವತ್ತು ನನಗೆ ಇಂಟರ್ವ್ಯೂ ಇದೆ ಸರ್, ಮಿಸ್ ಆಗ್ಬಿಟ್ರೆ , ನಿಮಗೆ ಗೊತ್ತಲ್ಲ ಸರ್ ಮಾರ್ಕೆಟ್ ಬೇರೆ ಕುಸಿದಿದೆ, ಇಂಟರ್ವ್ಯೂ ಕಾಲ್ ಬರೋದೇ ಕಷ್ಟ, ಅಂತದ್ದರಲ್ಲಿ ಬಂದಿರುವ ಅವಕಾಶ ಇವರ ಪಟ್ಟಾಭಿಷೇಕ ಮಹೋತ್ಸವಕ್ಕೆ ಸಿಕ್ಕಿ ಹಾಳಗುತ್ತಾ??

ಹೀಗೆ ಹೀಗೆ ಒಂದೇ ಸಮನೆ ತನ್ನ ದಿಗಿಲನ್ನು, ಹೇಳುತ್ತಿದ್ದವ , ಬಸ್ಸಿನಲ್ಲಿ ನನ್ನ ಮುಂದೆ ಕುಳಿತಿದ್ದ ಯುವಕ. ಹೌದು, ರೀ ನಿನ್ನೆ ನಾನು ನನ್ನಂತಹ, ಎಷ್ಟೋ ಜನರು ಪಡಬಾರದ ಪಾಡು ಪಟ್ಟು ಮನೆ ತಲುಪಿದ್ದಾರೆ, ಕೈಲಾದವರು ಆಟೋದಲ್ಲಿ ಒಂದಕ್ಕೆ ಎರಡರಷ್ಟು ಕೊಟ್ಟು ಹೋದರೆ, ಇನ್ನು ಕೆಲವರು ಬಸ್ಸಿನಲ್ಲೇ ಹೋದರು, ಇನ್ನು ಕೆಲವರಿಗೆ ಹೋಗಲು ಬಸ್ಸೇ ಇಲ್ಲ, ನಟರಾಜ ಸರ್ವಿಸ್ ಅವರದು ಪಾಪ Sad

ಟ್ರಾಫಿಕ್ನ ನಡುವೆ ಅನಾಥವಾಗಿ ಕೂಗುತಿದ್ದ ಅಂಬುಲೆನ್ಸ್ಗಳನ್ನೂ ಕೇಳುವವರೇ ಇಲ್ಲ, ಅದರಲ್ಲಿದ್ದವ್ರ ಕತೆ ಏನಾಗಿರಬೇಡ? ಶಾಲೆ ಬಿಟ್ಟು ಮನೆಗೆ ಹೋಗುತ್ತಿದ್ದ ಮಕ್ಕಳನ್ನು ನೋಡಬೇಕು, ಬಸ್ಸ್ ನಿಲ್ದಾಣದಲ್ಲಿ ಕಾದು ಕಾದು ಬಸವಳಿದಿದ್ದ , ಆ ಮುಖಗಳು, ವಯೋವ್ರುದ್ದರು ಅಬ್ಬಾ!!

ಇವೆಲ್ಲ ನಮ್ಮ ರಾಜಕಾರಣಿಗಳ ಬುದ್ದಿಗೆ ಹೊಳೆಯುವುದಿಲ್ಲವೇ? (ಅವರಿಗೆ ಬುದ್ದಿ ಇರುತ್ತಾ ?), ಇದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ನ್ಯಾಯಾಲಯ , ಇಂತಹ ಸಭೆ ಸಮಾರಂಭಗಳನ್ನೂ ಊರ ಹೊರಗೆ ಮಾಡಿ ಎಂದು, ಆದರೆ ನಮ್ಮ ರಾಜಕಾರಣಿಗಳಿಗೆ ಅದು ಕೇಳುವುದೇ ಇಲ್ಲ.

ನಿನ್ನೆಯಂತು ಜೆ.ಡಿ.ಎಸ್ ನವರಿಗೆ ಅದೆಷ್ಟು ಮಂದಿ ಶಾಪ ಹಾಕಿದ್ದರೋ ಗೊತ್ತಿಲ್ಲ!!!!!

Monday, November 3, 2008

"ಚಿತ್ರನ್ನಾಕ್ಕು ಸಂಚಕಾರ ತಂದ ಲೆಹಮನ್ ಬ್ರದರ್ಸ್!!"

ಈ ತಲೆಸಾಲು ಸರಿ ಇಲ್ಲ , ಚಿತ್ರಾನ್ನಕ್ಕೆ ಯಾರು ಟೊಮೇಟೊ ಹಾಕೋದಿಲ್ಲ ಅಂತ ಗೆಳತಿ ಸವಿತಾ ಅವರು ಸಾರಿ ಸಾರಿ ಹೇಳಿದ್ರು ನಾನು ಕೇಳಿಲ್ಲ. ನಮ್ಮ ಚಿತ್ರಾನ್ನದ ವಿಶೇಷ ಅಂದ್ರೆ ಟೊಮೇಟೊ ಹಾಕೋದೆ ರೀ ಮೇಡಂ ಅಂತ ಹೇಳಿ ಬರೀತಿದ್ದೀನಿ.

ಮೊನ್ನೆ (ಶುಕ್ರವಾರ) ಮಾರುಕಟ್ಟೆಗೆ ಹೋಗಿ ತರಕಾರಿಯ ಬೆಲೆ ಕೇಳಿ ತಲೆ ತಿರುಗಿ ಹೋಯ್ತು. ನಂಗೆ ಅತಿ ಮುಖ್ಯವಾಗಿ ಬೇಕಾಗಿರೋ 'ಟೊಮೇಟೊ , ಹಸಿರು ಮೆಣಸಿನಕಾಯಿ' ಬೆಲೆ ಗಗನಕ್ಕೆ ಏರಿಕುಳಿತಿತ್ತು.
"ಟೊಮೇಟೊ ಎಷ್ಟಕ್ಕೋ" ಅಂದ್ರೆ 80 ರೂಪಾಯಿ ಅನ್ನಬೇಕೆ!!

ನನಗೋ ಟೊಮೇಟೊ ಇಲ್ಲಾಂದ್ರೆ ಚಿತ್ರಾನ್ನ ಮಾಡೋಕೆ ಇಷ್ಟ ಆಗೋಲ್ಲ. ಬೇರೆ ಏನು ಮಾಡೋದು ಇಲ್ಲ
(ನಿಜ ಹೇಳ್ಬೇಕು ಅಂದ್ರೆ ಚಿತ್ರಾನ್ನ ಬಿಟ್ಟು ಬೇರೆ ಏನು ಮಾಡೋಕು ಬರೋಲ್ಲ ನಂಗೆ:) )
ಮನಸಿನ್ನಲ್ಲೇ ಲೆಹಮನ್ ಬ್ರದರ್ಸ್ರನ್ನು ಶಪಿಸುತ್ತ ಮನೆ ದಾರಿ ಹಿಡಿದೆ.

-- ರಾಕೇಶ್ ಶೆಟ್ಟಿ Laughing out loud

Friday, October 24, 2008

ದೀಪಾವಳಿಯ 'ಒಲವಿನ ಉಡುಗೊರೆ'

'ರಾಖಿ' ಹಬ್ಬದ ದಿನ ನೀ ಬಂದು
'ರಾಕಿ' ಎಂದು ನನ್ನ ಕರೆದಾಗಲೇ
ಮನದಲ್ಲಿ ಅನ್ನಿಸಿತ್ತು , ಏನೋ
'ಅನಾಹುತ' ನನಗಾಗಿ ಕಾಯುತ್ತಿದೆ ಎಂದು.

'ರಕ್ಷಾ ಬಂಧನ'ವ ಕಟ್ಟಲು ನೀ ಬಂದೆಯಾ?
ಎಂದು ನಾ ಕೇಳುವಷ್ಟರಲ್ಲಿ , ನೀ
ಕಟ್ಟಿದ್ದೆ ನನಗೆ 'ಪ್ರೇಮ ಬಂಧನ'ವ.

'ಕ್ಯಾಂಡಲ್ ಲೈಟ್ ಡಿನ್ನರ್' ಗೆ ನನ್ನ ಆಹ್ವಾನಿಸಿ
ಲೈಟ್ ಆರಿಸಿ , ಕ್ಯಾಂಡಲ್ ನನ್ನ ಕೈಗಿಟ್ಟು
ಕಾಣದಂತೆ ಮಾಯವಾದವಳು ನೀನೆ ಅಲ್ವಾ!!

ಮತ್ತೆ ನೀ ಕಾಣಿಸಿದ್ದು ದೀಪಾವಳಿಯ ದಿನ
ದೀಪ ಹಿಡಿದು ನಿಂತ ಮುದ್ದು ಗೌರಿಯಂತೆ
ಪ್ರೀತಿಯಿಂದ ನೀ ಕೊಟ್ಟೆ ದೀಪಾವಳಿ ಉಡುಗೊರೆ
ತೆರೆದು ನೋಡಿದರೆ ಇತ್ತು ಅದರಲ್ಲಿ
ನಿನ್ನ 'ಮದುವೆಯ ಕರೆಯೋಲೆ '!!

-- ರಾಕೇಶ್ ಶೆಟ್ಟಿ Smiling

Thursday, October 23, 2008

ನಾನು ನನ್ನ ಪ್ರಿಯೆ

ನನ್ನ ಮನದ ಮನೆಯಲ್ಲಿ ನೀನೆ ಹಚ್ಚಿಟ್ಟ
ಪ್ರೀತಿಯ ದೀಪವ, ಕಾರಣ ಹೇಳದೆ ಏಕೆ ಆರಿಸಿ ಹೋದೆ ಗೆಳತಿ.
ನಮ್ಮ ಒಲವಿನ ದೋಣಿಯು ಬಿರುಗಾಳಿಗೆ ಸಿಕ್ಕಿದ್ದಾದರೂ ಹೇಗೆ.
ನೀ ಕೊಟ್ಟ ಪ್ರೀತಿಯ ಗುಲಾಬಿಯಲ್ಲಿ
ಮೋಸವೆಂಬ ಮುಳ್ಳನ್ನು ನಾ ನೋಡಲೇ ಇಲ್ಲ.

ಪ್ರೀತಿಯೆಂಬುದು '೨ ಹೃದಯಗಳ ವಿಷಯ' ಎಂದು ಹೇಳುತ್ತಾ
ನೀನು '೩ ನೆ ಹೃದಯ'ವ ಸದ್ದಿಲ್ಲದೆ ಹುಡುಕಿಕೊಂಡಿದ್ದೆ!
ಆಗ ನೆನಪಿಗೆ ಬಂದಿದ್ದು , ನೀನು ಯಾವಾಗಲು ಹೇಳುತ್ತಿದ್ದ ಮಾತು
" ಪ್ರಿಯ ನಮ್ಮ ಪ್ರೀತಿ 2 way " ಎಂದು.
ಆದರೆ ನಿನ್ನ ಇನ್ನೊಂದು way ನನಗೆ ತಿಳಿಯುವಷ್ಟರಲ್ಲಿ
ನಿನಗೆ ಮದುವೆಯಾಗಿ 2 ಮಕ್ಕಳು ಆಗಿದ್ದವು!!!!!


-- ರಾಕೇಶ್ ಶೆಟ್ಟಿ Smiling

ಪುಷ್ಪಕ ವಿಮಾನದ ಚೆಲುವೆ

ಮುಂಜಾನೆಯ ಮಂಜಿನಲಿ, ಚುಮು ಚುಮು ಚಳಿಯಲಿ
ಕುಳಿತಿದ್ದೆ ನಾ ಕಬ್ಬನ್ ಪಾರ್ಕಿನ ಬೆಂಚುಗಲ್ಲಿನ ಮೇಲೆ
ಹಕ್ಕಿಗಳ ಕಲರವದ ಗಾನ ಕಿವಿಯಲ್ಲಿ ಗುಯ್ಯ್ ಗುಡುತ್ತಿತ್ತು
ಆ ಚಿಲಿ ಪಿಲಿ ಗಾನದ ನಡುವೆಯೂ ಅದೆಂತದೋ ದಿವ್ಯ ಮೌನ

ತಂಗಾಳಿಯು ನನ್ನೆಡೆಗೆ ತೇಲಿ ಬಂದ ಅನುಭವ
ಕಣ್ಣೆತ್ತಿ ನೋಡಿದರೆ ಎದುರಿಗೆ ನಿಂತಿದ್ದಳು
ಮುಂಜಾನೆಯ ಮಂಜಿನಂತೆ ಕಂಗೊಳಿಸುತಿದ್ದಳು
ಚಂದ್ರನ ಕಂಡ ನೈದಿಲೆಯಂತೆ ಸಂತಸ ಮನದಲ್ಲಿ

ಅವಳ ಕಣ್ಣುಗಳ ಕಡಲಲ್ಲಿ ನಾ ತೇಲುತಿದ್ದರೆ
ಮೌನವೆ ಮಾತಾಗಿ, ಲೋಕ ಮರೆತೆ ಹೋಯಿತು
ಮೌನ ಸೀಳಿ ಮನದ ಮಾತ ಹೇಳಿದಳು ಅವಳು

'ಅನಿಸುತಿದೆ ಯಾಕೋ ಇಂದು' ಎಂದು ಹಾಡುತ್ತಾ
ನನ್ನ ಪಕ್ಕ ಬಂದು ಕುಳಿತು ನಕ್ಕಳು.
ಕುಳಿತವಳೇ 'ವಿಧಾನ ಸೌಧ'ದ ಗೋಪುರ
ತೋರಿಸಿ ಮುಗ್ದವಾಗಿ, ಪ್ರಿಯ ನನ್ನ ಅಲ್ಲಿಗೆ
ಕರೆದುಕೊಂಡು ಹೋಗುವೆಯ ಎಂದು ಕೇಳಿದಾಗ
'ಮುಂಗಾರು ಮಳೆ'ಯ ಆ ಮುಗ್ದ ಹುಡುಗೀ ನೀನೆ ಎಂದು
'ಕುಣಿದು ಕುಣಿದು ' ಬಾರೆ ಎಂದು ನಾ ಹಾಡುತ್ತಿರುವಾಗಲೇ
ಬಂದೆ ಬಿಟ್ಟಿತಲ್ಲ ನಿನ್ನ ಕರೆದೊಯ್ಯಲು ,
'ತವರು ಮನೆಯ ಪುಷ್ಪಕ ವಿಮಾನ' (ಹುಚ್ಚಾಸ್ಪತ್ರೆ ವಾಹನ)!!

- ರಾಕೇಶ್ ಶೆಟ್ಟಿ Smiling

ಹಾಟ್ಸ್ ಆಪ್ ಇಂಡಿಯಾ

ಇಂದು ಈ ಗೀತೆಯನ್ನು ಕೇಳುತಿದ್ದೆ. ಆಹಾ ಕೇಳಲು ಕರ್ಣಾನಂದ.
'ಹಂಸಲೇಖ' ಅವರ ಲೇಖನಿಯಿಂದ ಮೂಡಿಬಂದಿರುವ ಈ ಗೀತೆಯನ್ನೊಮ್ಮೆ ನೋಡಿ.
ಕವಿ ಮನಸಿನಲ್ಲಿ ಭವ್ಯ ಭಾರತದ ಚಿತ್ರಣ ಬಿಡಿಸಿಟ್ಟಿದ್ದಾರೆ ಹ್ಯಾಟ್ಸ್ ಆಪ್ ಟು ಹಂಸಲೇಖ.

"ಒಂದು ಬಾಣ ಪಕ್ಷಿಗೆ ತಾಕಿದರೆ
ರಾಮಾಯಣ ಕಾವ್ಯ ಹರಿಯುವುದು
ಒಂದು ಹೆಣ್ಣು ನೊಂದು ಕೂಗಿದರೆ
ಮಹಾಭಾರತ ಕಥನ ಕೇಳುವುದು
ಗಂಗಾ ಯಮುನಾ ತುಂಗಾ ಭದ್ರಾ...

ನದಿ ನದೆಗಳೇ ಇವಳಿಗೆ ನರ ನಾಡಿ
ಸಾಗರಗಳೇ ಇವಳಿಗೆ ಒಡನಾಡಿ
ಮಹಾ ವೀರರ, ಸಿಕ್ಖರ, ಸಿದ್ದರ , ಬುದ್ದರ
ಜನನಿ ಜನನಿ ನೀ

ಹಾಟ್ಸ್ ಆಪ್ ಇಂಡಿಯಾ ಹಾಟ್ಸ್ ಆಪ್ ಇಂಡಿಯಾ

ವಿಜಯೋತ್ಸವಕೆ ಬಂಗಾರದ ಮಳೆಗರೆದರು
ವಜ್ರ ವೈಡೂರ್ಯ ನಡು ಬೀದೀಲಿ ಚೆಲ್ಲಾಡಿದರು
ಗೆದ್ದವನಿಲ್ಲಿ ಸೋತವನ ಸನ್ಮಾನಿಸಿದ
ಗೊಮ್ಮಟನಾಗಿ ತ್ಯಾಗದಲ್ಲಿ ರಾರಾಜಿಸಿದ

ರಾಗ ಯೋಗ ನಾದ ವೇದ
ಧರೆಗೆ ತಂದರು ಸುಖಿಸಿ ಎಂದರು

ಇಲ್ಲಿ ಬಾಳಿನ ಚಿಂತೆ ಸಂತರದು
ಇಲ್ಲಿ ನಾಳಿನ ಚಿಂತೆ ದೇವರದು
ತುಂಡು ಬಟ್ಟೆಯ ತಾತನ ಉಪವಾಸ
ಘನ ಗುಲಾಮ ಗಿರಿಯ ಕಳೆಯುವುದೂ

ನಾದ ವೇದ ನಾಟ್ಯ ದೈವ
ಇಲ್ಲಿ ತೆಂಕಣವೆಲ್ಲ ದೈವ ಸ್ವರ
ಇಲ್ಲಿ ಬಡಗಣವೆಲ್ಲ ಧರ್ಮ ಸ್ವರ
ರಾಮ ಕೃಷ್ಣ ವಿವೇಕರ
ಸಂತರ ಸಿದ್ದರ ಜನನಿ ಜನನಿ ನೀ

ಹಾಟ್ಸ್ ಆಪ್ ಇಂಡಿಯಾ ಹಾಟ್ಸ್ ಆಪ್ ಇಂಡಿಯಾ "

-ರಾಕೇಶ್ ಶೆಟ್ಟಿ Smiling

ಮೋಹಿನಿ ಕಾಟ

'ಆಕಾಶವೇ ಬೀಳಲಿ ಮೇಲೆ' ಎಂದು ನಾ ಹಾಡುತಿದ್ದರೆ
'ನಾ ನಿನ್ನ ಮರೆಯಲಾರೆ' ಎಂದು ನೀ ಹಾಡುತಿದ್ದೆ ಅಂದು
ಆದರೆ ಇಂದು "ತಂಗಾಳಿಯಲ್ಲಿ ನಾನು ತೇಲಿ ಬಂದೆ " ಎಂದು
ನೀನು "ಮೋಹಿನಿ"ಯಾಗಿ ನನ್ನ ಏಕೆ ಕಾಡುತ್ತಿರುವೆ? ಸಿಂಧು
ಅಷ್ಟಕ್ಕೂ ನಿನಗೆ 'Drink N Drive' ಮಾಡಿ!
'ಸ್ವರ್ಗ' ಸೇರಲು ನಾ ಹೇಳಿದ್ದೆನಾ!!?

- ರಾಕೇಶ್ ಶೆಟ್ಟಿ Laughing out loud

ಹುಬ್ಬಳ್ಳಿ ಹುಡುಗಿ

'ಹುಬ್ಬಳ್ಳಿ' ಶಹರದಲ್ಲಿ , ದುರ್ಗದ ಬಯಲಲ್ಲಿ
ಕಂಡೆ ನಾ 'ಹೂ ಬಳ್ಳಿ' ಯಂತ ಬೆಡಗಿಯ
'ಚುರುಮುರಿ' ಅವಳ ಕೈಯಲ್ಲಿ, ರೋಜಾ ಹೂ ಜಡೆಯಲ್ಲಿ

ಮಾನಸ ಗಂಗೆಯಲ್ಲಿ ಮಿಂದ ಮಹಾರಾಣಿಯಂತೆ ಇದ್ದಳವಳು
ಮನವೆಂಬ ಮಾಯಾ ಮೃಗದ ಬೆನ್ನೇರಿ ಝೇಂಕಾರ ಮಾಡಿದಳು
ಪೂರ್ಣಿಮೆಯ ಚಂದ್ರನ ಕಂಡ ಸಮುದ್ರ ರಾಜನ ಹಾಗೆ
ಮನಸ್ಸೆಂಬ ಮಹಾ ಮರ್ಕಟ ಜಿಗಿದು ನರ್ತನ ಮಾಡಿತ್ತು

ಹೃದಯ ರಂಗೋಲಿಯಲ್ಲಿ ಮೂಡಿ ಬಂದ
ಚಂದದ ಚಿತ್ರ ಇವಳದೇ ಎನಿಸಿತು
ಸಪ್ತ ಸಾಗರ ದಾಟಿ ಬಂದ ಚೆಲುವೆಯಂತಿರುವ
ಅವಳ ಜೊತೆಯೇ ಸಪ್ತಪದಿ ತುಳಿಯುವ ಆಸೆ

ನನ್ನಾಸೆಯ ಅವಳಿಗೆ ಹೇಳಲೆಂದೇ ಹೆಜ್ಜೆಯಿಟ್ಟೆ
ಅಷ್ಟರಲ್ಲಿ ಅವಳೇ ನೋಡಿದಳು ನನ್ನ
ತಾಯಿಯ ಮುದ್ದು ಮುಖವ ನೋಡಿ
ಮೌನವಾಗುವ ಮಗುವಂತೆ ನಿಂತುಬಿಟ್ಟೆ

ನನ್ನ ಕಡೆ ತಿರುಗಿ ಮುದ್ದಾದ ಮಾತೊಂದ ಹೇಳಿದಳು
"ಚಲೋ ಅದಿಲೇ ನಂಗ್ ಬಾಳ್ ಹಿಡ್ಸಿ
ನನ್ ಕೂಡ ಮದ್ವಿ ಆಗ್ತಿಯೇನ "
ಬೆಪ್ಪಾಗಿ ನೋಡುತ್ತಲಿದ್ದೆ ಅವಳ
"ಹಿಂಗ್ಯಾಕೆ ನಾಚ್ಕೊತಿ,
ಮನ್ಯಾಗ್ ಬಂದ್ ಮಾತಡ್ಲೆನ" ಅಂದಳು

ಬಯಸಿ ಬರುತ್ತಿರುವ ಭಾಗ್ಯವ ನೆನೆದು
'ಓಕೆ' ಹೇಳ ಹೊರಟೆ ,ಅಷ್ಟರಲ್ಲಿ
ಗೆಳೆಯನ ದ್ವನಿ ಕೇಳಿತ್ತು
"ಕಚೇರಿಗೆ ಹೋಗೋ ಹೊತ್ತಾತು
ಕನಸ್ ಕಂಡಿದ್ದ್ ಸಾಕ್ ಏಳ್ಲೇ ಮಗನ!!"

- ರಾಕೇಶ್ ಶೆಟ್ಟಿ Smiling

ಆಗ ಕಾಶ್ಮೀರದಲ್ಲಿ ಅವರಿರಲಿಲ್ಲವಂತೆ

ಇತ್ತೀಚಿಗೆ 'ಕಾಶ್ಮೀರ'ಕ್ಕೆ ಸಂಬಂಧಿಸಿದಂತೆ 'ವಿಶ್ವ ಸಂಸ್ಥೆ'ಯಲ್ಲಿ ನಡೆದ ಒಂದು ಘಟನೆಯು ಈ-ಮೇಲ್ ನಲ್ಲಿ ಬಂದಿತ್ತು. ಅದನ್ನು ನಿಮ್ಮ ಮುಂದಿಡುತಿದ್ದೇನೆ.

ಭಾರತೀಯ ರಾಯಭಾರಿ ಭಾಷಣ ಶುರು ಮಾಡುತ್ತಾ ಹೀಗೆಂದರು
" ನಾನು ಕಾಶ್ಮೀರ ಸಮಸ್ಯೆಯ ಬಗ್ಗೆ ಮಾತನಾಡುವುದಕ್ಕಿಂತ ಮೊದಲು 'ಋಷಿ ಕಶ್ಯಪ'ರ ಬಗ್ಗೆ ಹೇಳಲಿಚ್ಛಿಸುತ್ತೇನೆ. ಅವರಿಂದಾಗಿಯೇ ಕಣಿವೆಗೆ 'ಕಾಶ್ಮೀರ' ಎಂಬ ಹೆಸರು ಬಂತು. ಒಮ್ಮೆ ಅವರು ಹೀಗೆ ಕಾಶ್ಮೀರ ಕಣಿವೆಯಲ್ಲಿ ಸಾಗುವಾಗ 'ಕಲ್ಲು ಬಂಡೆ'ಗಳ ನಡುವೆ ಹರಿಯುತಿದ್ದ ಜಲಧಾರೆಯನ್ನು ನೋಡಿ, ಸ್ನಾನ ಮಾಡುವ ಮನಸ್ಸಾಯಿತು. ಬಟ್ಟೆಯನ್ನು ಕಳಚಿ ಬಂಡೆಗಳ ಮೇಲಿಟ್ಟು 'ಕಶ್ಯಪ'ರು ಸ್ನಾನ ಮುಗಿಸಿ ನೋಡಿದರೆ, ಅವರು ಬಂಡೆಯ ಮೇಲಿಟ್ಟಿದ್ದ 'ಬಟ್ಟೆ'ಯನ್ನು 'ಪಾಕಿಸ್ತಾನಿ 'ಯೊಬ್ಬ ಕದ್ದೊಯ್ದಿದ್ದ ."

ಅವರು ಇಷ್ಟು ಹೇಳಿ ಮುಗಿಸುವಷ್ಟರಲ್ಲಿ 'ಪಾಕಿಸ್ತಾನಿ ರಾಯಭಾರಿ' ಕುಳಿತಲ್ಲಿಂದ ಜಿಗಿದೆದ್ದು ಹೇಳಿದ
"ನೀವು ಏನು ಮಾತಾಡ್ತಾ ಇದ್ದೀರಾ? ಆ ಕಾಲದಲ್ಲಿ 'ಪಾಕಿಸ್ತಾನಿ'ಗಳು 'ಕಾಶ್ಮೀರ'ದಲ್ಲಿ ಇರಲೇ ಇಲ್ಲ!! "

ನಸು ನಕ್ಕ ಭಾರತೀಯ ರಾಯಭಾರಿ, " ಎಲ್ಲರಿಗೂ ವಿಷಯವನ್ನು ಸ್ಪಷ್ಟಪಡಿಸಿರುವುದರಿಂದ ನಾನು ನನ್ನ ಮಾತನ್ನು ಮುಂದುವರೆಸುತ್ತೇನೆ"

ಆದರೆ ಈಗ ಅವರು ಹೇಳುತ್ತಾರೆ 'ಕಾಶ್ಮೀರ' ಅವರಿಗೆ ಸೇರಿದ್ದು ಎಂದು..

-- ರಾಕೇಶ್ ಶೆಟ್ಟಿ Smiling