Saturday, February 14, 2009

ಫೆಬ್ರವರಿ 14 : ಅದ್ಯರಾ ದಿನವೋ?

ಮೂರು options ಇದೆ, ಯಾವುದು ಒಳ್ಳೇದು ಅನ್ನಿಸುತ್ತೋ ಅದೇ ತಗೊಳ್ಳಿ.

೧.'ಪಬ್ ಭರೋ' ಚಳುವಳಿ

೨.'ಸಾಮೂಹಿಕ ಪ್ರೇಮಿಗಳ ದಿನಾಚರಣೆ'

೩.'ರಾಖಿ ಕಟ್ಟಿ ಇಲ್ಲ ತಾಳಿ ಕಟ್ಟಿ'

ಬಹುಷಃ ನಮ್ಮ ಸ್ವಾತಂತ್ರದ ಸುವರ್ಣ ಮಹೋತ್ಸವಕ್ಕೂ ಯಾರು ಇಷ್ಟೊಂದು ತಲೆ ಕೆಡಿಸಿಕೊಂಡು ಕಾರ್ಯಕ್ರಮಗಳನ್ನ ರೂಪಿಸಿರಲಿಲ್ಲ ಅನ್ನಿಸುತ್ತೆ.ಈ ಮೇಲಿನ ಮೂರು ಆಪ್ಶನ್ಗಳು ಪ್ರೇಮಿಗಳ ದಿನಕ್ಕಾಗಿ. ಬೆಂಗಳೂರಿನ ಮಟ್ಟಿಗೆ ಹೇಳುವದಾದರೆ ಈ ಎಲ್ಲ ಮಹಾನ್ ಚಳುವಳಿಗಳು 'ಮಹಾತ್ಮ ಗಾಂಧೀ' ರಸ್ತೆಯಲ್ಲೇ ನಡೆಯಬಹುದು ಅನ್ನಿಸುತ್ತೆ.

ಮೊದಲಿಗೆ ಮಾನ್ಯ ಮಹಿಳಾ ಕಲ್ಯಾಣ (?) ಸಚಿವೆ ರೇಣುಕಮ್ಮ ಪ್ರಾಯೋಜಿತ 'ಪಬ್ ಭರೋ' ಚಳುವಳಿಯಲ್ಲಿ ತೇಲಾಡಿಕೊಂಡು "ಕುಡಿಯೋದೆ ನನ್ನ ವೀಕ್ನೆಸ್ಸು" ಅಂತಾ ಹಾಡ್ಕೊಂಡು ಪಬ್ಬಿನ ಮಬ್ಬಿನಿಂದ ಹೊರ ಬಂದು ಪ್ರಗತಿಪರರಿಂದ ಒಂದು ಉಚಿತ 'ಕೆಂಪುಗುಲಾಬಿ' ಪಡೆದು "ಈ ಗುಲಾಬಿ ಹೂ ನಿನಗಾಗಿ ಇದು ಚೆಲ್ಲುವ ಪರಿಮಳ ನಿನಗಾಗಿ" ಅಂತ ಹಾಡ್ತಾ ಯಾವುದಾದರು ಹುಡುಗಿಯ ಜೊತೆ ಪಾರ್ಕಿಗೋ ಅಥವಾ ಇನ್ನೆಲೋ ಹೊರಟರೆ, ಅಲ್ಲಿಗೆ ಶ್ರೀರಾಮ ಸೇನೆಯವರು ಎಂಟ್ರಿ ಹಾಕಿ "ಸಪ್ತ ಪದಿ, ಇದು ಸಪ್ತ ಪದಿ" ಅಥವಾ "ಅಣ್ಣ ತಂಗಿಯರ ಈ ಬಂಧ" ಅಂತ ಹಾಡಿಸ್ತಾರೆ.

ಈ ಎಲ್ಲ ಮಹಾನ್ ಹೋರಾಟಗಳ ನಡುವೆ ಇನ್ನು ಕೆಲವರು ರಾಮಸೆನೆಯವರಿಗೆ ಕೊಡಲು 'ಪಿಂಕ್ ಚಡ್ಡಿ' ಸಂಗ್ರಹಿಸುತಿದ್ದಾರೆ.ಅದಕ್ಕೋಸ್ಕರವೇ ಒಂದು ಪ್ರತ್ಯೇಕ ಬ್ಲಾಗ್ ಸಹ ಶುರು ಮಾಡಿದ್ದಾರೆ.ಒಂದು ವಿಕೃತಿಯನ್ನು ವಿರೋಧಿಸಲು ಎಷ್ಟೆಲ್ಲ ವಿಕೃತಿಗಳು.

ಇವಿಷ್ಟು ಅನಾಹುತವನ್ನು ತನ್ನ ನಾಮಧೇಯದ ರಸ್ತೆಯಲ್ಲೇ ನೋಡುವ ಮಹಾತ್ಮ 'ಒಹ್! ನನ್ನ ಸ್ವತಂತ್ರ ಭಾರತವೇ' ಅಂತ ಕಂಬನಿ ಮಿಡಿಯುವುದಿಲ್ಲವೆ?