'ಹುಬ್ಬಳ್ಳಿ' ಶಹರದಲ್ಲಿ , ದುರ್ಗದ ಬಯಲಲ್ಲಿ
ಕಂಡೆ ನಾ 'ಹೂ ಬಳ್ಳಿ' ಯಂತ ಬೆಡಗಿಯ
'ಚುರುಮುರಿ' ಅವಳ ಕೈಯಲ್ಲಿ, ರೋಜಾ ಹೂ ಜಡೆಯಲ್ಲಿ
ಮಾನಸ ಗಂಗೆಯಲ್ಲಿ ಮಿಂದ ಮಹಾರಾಣಿಯಂತೆ ಇದ್ದಳವಳು
ಮನವೆಂಬ ಮಾಯಾ ಮೃಗದ ಬೆನ್ನೇರಿ ಝೇಂಕಾರ ಮಾಡಿದಳು
ಪೂರ್ಣಿಮೆಯ ಚಂದ್ರನ ಕಂಡ ಸಮುದ್ರ ರಾಜನ ಹಾಗೆ
ಮನಸ್ಸೆಂಬ ಮಹಾ ಮರ್ಕಟ ಜಿಗಿದು ನರ್ತನ ಮಾಡಿತ್ತು
ಹೃದಯ ರಂಗೋಲಿಯಲ್ಲಿ ಮೂಡಿ ಬಂದ
ಚಂದದ ಚಿತ್ರ ಇವಳದೇ ಎನಿಸಿತು
ಸಪ್ತ ಸಾಗರ ದಾಟಿ ಬಂದ ಚೆಲುವೆಯಂತಿರುವ
ಅವಳ ಜೊತೆಯೇ ಸಪ್ತಪದಿ ತುಳಿಯುವ ಆಸೆ
ನನ್ನಾಸೆಯ ಅವಳಿಗೆ ಹೇಳಲೆಂದೇ ಹೆಜ್ಜೆಯಿಟ್ಟೆ
ಅಷ್ಟರಲ್ಲಿ ಅವಳೇ ನೋಡಿದಳು ನನ್ನ
ತಾಯಿಯ ಮುದ್ದು ಮುಖವ ನೋಡಿ
ಮೌನವಾಗುವ ಮಗುವಂತೆ ನಿಂತುಬಿಟ್ಟೆ
ನನ್ನ ಕಡೆ ತಿರುಗಿ ಮುದ್ದಾದ ಮಾತೊಂದ ಹೇಳಿದಳು
"ಚಲೋ ಅದಿಲೇ ನಂಗ್ ಬಾಳ್ ಹಿಡ್ಸಿ
ನನ್ ಕೂಡ ಮದ್ವಿ ಆಗ್ತಿಯೇನ "
ಬೆಪ್ಪಾಗಿ ನೋಡುತ್ತಲಿದ್ದೆ ಅವಳ
"ಹಿಂಗ್ಯಾಕೆ ನಾಚ್ಕೊತಿ,
ಮನ್ಯಾಗ್ ಬಂದ್ ಮಾತಡ್ಲೆನ" ಅಂದಳು
ಬಯಸಿ ಬರುತ್ತಿರುವ ಭಾಗ್ಯವ ನೆನೆದು
'ಓಕೆ' ಹೇಳ ಹೊರಟೆ ,ಅಷ್ಟರಲ್ಲಿ
ಗೆಳೆಯನ ದ್ವನಿ ಕೇಳಿತ್ತು
"ಕಚೇರಿಗೆ ಹೋಗೋ ಹೊತ್ತಾತು
ಕನಸ್ ಕಂಡಿದ್ದ್ ಸಾಕ್ ಏಳ್ಲೇ ಮಗನ!!"
- ರಾಕೇಶ್ ಶೆಟ್ಟಿ
No comments:
Post a Comment