ಯಾರು ತಮ್ಮ ಸಾವನ್ನು ತಾವೇ ಹುಡುಕಿ ಹೋಗುತ್ತಾರೆ? ಆದರೆ ಕಳೆದವಾರ ಮುಂಬೈ ಮಾರಣ ಹೋಮದಲ್ಲಿ ಸಾವನ್ನು ಹುಡುಕಿಕೊಂಡು ಹೋದ ವೀರ ಪೋಲಿಸ್ ಅಧಿಕಾರಿಯ ಕತೆಯಿದು.
ಮುಂಬೈ ಮೂಲದ ಆಂಗ್ಲ ಪತ್ರಿಕೆಯೊಂದರಲ್ಲಿ ಬಂದಿದ್ದ ಮಾಹಿತಿಯಿದು, ಆ ವೀರನ ಬಗ್ಗೆ ಎಲ್ಲರಿಗೂ ತಿಳಿಯಲಿ ಎಂಬ ಉದ್ದೇಶದಿಂದ ಇಲ್ಲಿ ಬರೆಯುತಿದ್ದೇನೆ.
ಸುತ್ತಲೂ ಕಗ್ಗತ್ತಲು, ಬೀದಿ ಬದಿಯ ದೀಪವೂ ಅಲ್ಲಿರಲಿಲ್ಲ. ಅದೇ ಜಾಗದಲ್ಲಿ ಕೈಯಲ್ಲಿ ರೈಫಲ್ ಹಿಡಿದು ಪಹರೆ ಕಾಯುತಿದ್ದವರು ಮುಂಬೈನ ಪೋಲಿಸ್ ಸಬ್-ಇನ್ಸ್ಪೆಕ್ಟರ್ ಬಾಪುರಾವ್ ದುರ್ಗುಡೆ. ಅವರಿಗೆ ಕಳೆದ ಬುಧವಾರ ಉಗ್ರರ ದಾಳಿಗೆ ತುತ್ತಾಗಿದ್ದ 'ಕಾಮ ಆಸ್ಪತ್ರೆ'ಯ ಬಳಿಯಿರುವ 'St Xavier’s' ಕಾಲೇಜ್ನ ಬಳಿ ಕರ್ತವ್ಯ ನಿರ್ವಹಿಸುವಂತೆ ಹಾಗೂ ಕಾಮ ಆಸ್ಪತ್ರೆಯ ಕಡೆ ಸಾರ್ವಜನಿಕರು ಬರದಂತೆ ತಡೆಯಲು ಆದೇಶ ಬಂದಿತ್ತು.
ಅವರು ನೋಡುತಿದ್ದಂತೆ ಇಬ್ಬರು ಕಾಲೇಜ್ ವಿದ್ಯಾರ್ಥಿಗಳಂತೆ ಕಾಣುವ ಯುವಕರು ಕಾಮ ಆಸ್ಪತ್ರೆ ಬಳಿ ಹೊರಟಿದ್ದರು, ದುರ್ಗುಡೆ ಯುವಕರನ್ನು ಎಚ್ಚರಿಸಲು "ಕಾಮ ಆಸ್ಪತ್ರೆ ಬಳಿ ಉಗ್ರರ ದಾಳಿಯಾಗಿದೆ, ಗುಂಡಿನ ದಾಳಿ ನಡೆಯುತ್ತಿದೆ, ಅತ್ತ ಹೋಗಬೇಡಿ" ಎಂದು ಕೂಗಿ ಹೇಳಿದರು. ಆದರೆ ಆ ಯುವಕರು ಒಮ್ಮೆ ದುರ್ಗುಡೆಯವರನ್ನು ನೋಡಿ ಮುಂದಡಿಯಿಟ್ಟರು.
ಬಹುಷಃ ಯುವಕರಿಗೆ ಹೇಳಿದ್ದು ಸರಿಯಾಗಿ ಕೇಳಿಲ್ಲ ಎಂದು ತಿಳಿದು, ಅವರತ್ತ ಹೆಜ್ಜೆಯಿಡಲು ಶುರು ಮಾಡಿದರು.
ಅವರ ಸನಿಹ ತೆರಳಿ ಅಡ್ಡಗಟ್ಟುವಷ್ಟರಲ್ಲಿ ಯುವಕನ ಕೈಯಲ್ಲಿದ್ದ AK47 ಬಾಯ್ತೆರೆದಿತ್ತು. ನಾನು ತಡೆದಿರುವುದು ಉಗ್ರರನ್ನು ಎಂದು ದುರ್ಗುಡೆಯವರಿಗೆ ತಿಳಿದು ರೈಫಲ್ ತೆಗೆಯುವಷ್ಟರಲ್ಲಿ ತೋರಿ ಬಂದ ಬುಲೆಟ್ ಅವರ ಎದೆಗೆ ನಾಟಿತ್ತು.
ಪ್ರಾಣ ಉಳಿಸಲು ಹೋದವನ ಪ್ರಾಣವನ್ನೇ ತೆಗೆದರು ಉಗ್ರರು.
ಆ ವೀರ ಯೋಧನಿಗೊಂದು ನುಡಿ ನಮನ.
No comments:
Post a Comment