Sunday, April 12, 2009

'ಹಿಂದೂ' ಎಂದರೆ??

'ಜೇನು ಗೂಡಿ'ಗೆ ಕಲ್ಲು ಹೊಡೆಯಲೋ ಬೇಡ್ವೋ ಅಂತ ಯೋಚನೆ ಮಾಡಿ,ಹೊಡೆಯುವ ತೀರ್ಮಾನ ಮಾಡಿದ್ದೇನೆ.

'ಹಿಂದೂ' ಅನ್ನುವುದು ಧರ್ಮನಾ? ಅಥವಾ ಜೀವನ ಪದ್ಧತಿನಾ? ಹಿಂದೂ ಅಂದರೆ ಯಾರು? ಹಿಂದೂ ಧರ್ಮ ಅಂದರೆ ಯಾವುದು? ಇತ್ಯಾದಿ ಪ್ರಶ್ನೆಗಳ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ.ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಓದಿದ್ದು,ಕೇಳಿದ್ದು,ನೋಡಿದ್ದನ್ನು ಸ್ವಲ್ಪ ಕದ್ದು Eye-wink ಜೊತೆಗೆ ನನ್ನ ಅಭಿಪ್ರಾಯವನ್ನು ಇಲ್ಲಿ ಹಂಚಿಕೊಳ್ಳುತಿದ್ದೇನೆ.ಈ ಲೇಖನ ಓದುತ್ತ ಓದುತ್ತ ಎಲ್ಲೋ ಓದಿದ ಹಾಗೆ ಇದೆ ಅನ್ನಿಸಿದ್ರೆ, ಬೈಕೋಬೇಡಿ ಯಾಕೆಂದ್ರೆ ಹಿಂದೂ ಧರ್ಮ ಅನ್ನುವ ಸಮುದ್ರದ ಆಳ-ಅಗಲಗಳ ಪರಿಚಯವಿರುಷ್ಟು ಬುದ್ದಿವಂತ ನಾನಲ್ಲ Smiling ಅಲ್ಲಿ ಇಲ್ಲಿ ಸಿಕ್ಕಿದ್ದನ್ನು ಸೇರಿಸಿ ಸಂಕ್ಷಿಪ್ತವಾಗಿ ಇಲ್ಲಿಡುವ ಕೆಲಸ ಮಾಡಿದ್ದೇನೆ ಅಷ್ಟೆ.

ಹಿಂದುತ್ವ- 'ತಮಸೋಮಾ ಜ್ಯೋತಿರ್ಗಮಯ’ ಎನ್ನುತ್ತದೆ. ಅಂದರೆ, "ಕತ್ತಲಿನಿಂದ ಬೆಳಕಿನೆಡೆಗೆ ಸಾಗೋಣ" ಹಾಗೂ ಹಿಂದೂ ಧರ್ಮದ ಮೂಲಭೂತ ತತ್ತ್ವ- “ಸತ್ಯವು ಏಕಮೇವಾದ್ವಿತೀಯವಾಗಿದೆ’ ಎಂದು.

ಹಿಂದೂ ಧರ್ಮದ ಅರಾಧ್ಯ ದೇವತೆಯೆಂದರೆ,ಅದು ಪ್ರಕೃತಿಯೇ.ಜೀವಧಾರಣೆಗೆ ಅಗತ್ಯಬಿರುವ ಪಂಚಭೂತಗಳ ಆರಾಧನೆಯೇ ಅಂದಿನ ರೂಢಿಯಾಗಿತ್ತು. ಶಾಖ-ಬೆಳಕು ನೀಡುವ ಸೂರ್ಯ, ದೈನಂದಿನ ಕಾರ್ಯಗಳಿಗೆ ಅಗತ್ಯನಾದ ಅಗ್ನಿ, ಕೃಷಿಗೆ ಅನುಕೂಲನಾದ ವರುಣ, ಮಳೆಯ ಅಧಿಪತಿಯಾದ ಇಂದ್ರ, ಜೀವನಾಧಾರನಾದ ವಾಯು- ಇವರೆಲ್ಲ ವೇದಕಾಲದ ದೇವತೆಗಳು.

ಹಿಂದೂ ಧರ್ಮದ ವ್ಯಾಖ್ಯೆಯಂತೆ, ಭಗವಂತ ಎಂದರೆ ಪ್ರಕೃತಿ. ಭಗವಂತ ಎಂದರೆ ಪುರುಷ. ಭಗವಂತ ಎಂದರೆ ಬ್ರಹ್ಮ, ವಿಷ್ಣು, ಮಹೇಶ್ವರ, ಲಕ್ಷ್ಮಿ, ಪಾರ್ವತಿ, ಸರಸ್ವತಿ… ಯಾರು ಬೇಕಾದರೂ. ಜೀವನದ ಅವಶ್ಯಕತೆಗೆ ತಕ್ಕಂತೆ ಇಲ್ಲಿ ಭಗವಂತ ರೂಪುಗೊಳ್ಳುತ್ತಾನೆ.ಅಂತೆಯೇ ರೈತನಿಗೆ ಮಣ್ಣೂ ದೇವರಾಗುತ್ತದೆ. ಸೈನಿಕನಿಗೆ ಮಾತೃಭೂಮಿ ದೇವತೆಯಾಗುತ್ತಾಳೆ. ಬೆಸ್ತನಿಗೆ ನದಿ ದೇವಿಯಾಗುತ್ತಾಳೆ.ಅಗೋಚರ ಶಕ್ತಿಯಾದ ಭಗವಂತನನ್ನು ಗ್ರಹಿಕೆಯ ವ್ಯಾಪ್ತಿಗೆ ಎಷ್ಟು ದಕ್ಕುತ್ತದೆಯೋ ಅಷ್ಟನ್ನು ಗ್ರಹಿಸಿ, ಆರಾಧಿಸುವುದು. ಆ ಮೂಲಕ ಭೂಮಿಯ ಮೆಲಿನ ತನ್ನ ಜೀವನ ನಿರ್ವಹಣೆಗೆ ಅಗತ್ಯ ಸಹಾಯವನ್ನು ಪಡೆಯುವುದು.

ಹಿಂದೂ ಧರ್ಮವು ‘ಧಾರ್ಮಿಕ ಮುಖಂಡ’ನೆಂದು ಕರೆಯಲ್ಪಡುವವನ ನಂಬಿಕೆ ಮತ್ತು ಅನುಭವಗಳಿಗಿಂತ ಹೆಚ್ಚಾಗಿ ಆತನ ನಡವಳಿಕೆಯ ಮೇಲೆ ತನ್ನ ನಂಬಿಕೆಯನ್ನು ಸ್ಥಾಪಿಸಿಕೊಳ್ಳುತ್ತದೆ.“ನಾನು ನಿಮ್ಮ ಮುಂದಾಳು, ನನ್ನನ್ನು ಅನುಸರಿಸಿ” ಎಂದು ಆದೇಶ ಮಾಡುವವನ ಅರ್ಹತೆಯನ್ನು ಇಲ್ಲಿ ಜನರೇ ನಿರ್ಧರಿಸುತ್ತಾರೆ. ಇಲ್ಲಿ ಮೌಢ್ಯಕ್ಕೆ, ಅಂಧ ಶ್ರದ್ಧೆಗೆ ಅವಕಾಶವಿರಲಿಲ್ಲ. (ಕಲುಷಿತ ಹಿಂದೂ ಜಾತಿಯ ಪರಿಸ್ಥಿತಿ ಇದಕ್ಕಿಂತ ಭಿನ್ನ. ಇಲ್ಲಿ ಢೋಂಗಿ ಗುರು ಶಿಷ್ಯರಿದ್ದಾರೆ, ಮೂಢ ಭಕ್ತರೂ ಇದ್ದಾರೆ).

ಹಿಂದುತ್ವದ ಮೇಲಿರುವ ‘ಪುರೋಹಿತಷಾಹಿ’ ಅಪವಾದ, ವಾಮಪಂಥೀಯರು ಹೊರಿಸಿದ ಮಿಥ್ಯಾರೋಪವಷ್ಟೆ.ಇಲ್ಲವಾದಲ್ಲಿ ಭಾರತದ ಅನೇಕಾನೇಕ ಅಧ್ಯಾತ್ಮಿಕ ಪಂಥಗಳ ಮುಖಂಡರು, ಸಂತರು, ಅಬ್ರಾಹ್ಮಣರೇ ಹೆಚ್ಚಿನ ಸಂಖ್ಯೆಯಲ್ಲಿರಲು ಸಾಧ್ಯವಿರುತ್ತಿರಲಿಲ್ಲ. ಪ್ರಾಕ್ಟಿಕಲ್ ಆಗಿ ನೋಡದೆ ಕೇವಲ ಥಿಯರಿಯನ್ನೇ ಓದಿ, ಕೈ ತೊಳೆದುಕೊಂಡು ಬ್ರಾಹ್ಮಣರ ಹಿಂದೆ ಬಿದ್ದಿರುವ ನಮ್ಮ ಬುದ್ದಿ ಜೀವಿ(?)ಗಳಿಗೆ ಜಾತಿ ಪದ್ದತಿಯಲ್ಲಿ ಬ್ರಾಹ್ಮಣೆತರ ಮೇಲ್ಜಾತಿಯವರ ದಬ್ಬಾಳಿಕೆ ಇತ್ತು ಹಾಗು ಇದೆ ಅಂತ ಹೇಳೋಕೆ ಪಾಪ ಬರೋದೇ ಇಲ್ಲ ಬಿಡಿ.

ಭಾರತ ಕಂಡ ಅಪ್ರತಿಮ ತತ್ತ್ವಶಾಸ್ತ್ರಜ್ಞ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಒಂದೆಡೆ ಹೀಗೆ ಹೇಳಿದ್ದಾರೆ, “ ಪ್ರವಾದಿಯೊಬ್ಬನನ್ನೇ ಆಧಾರವಾಗಿಟ್ಟುಕೊಂಡ ಧರ್ಮವು ಸಂಕುಚಿತ , ತೀವ್ರಗಾಮಿ, ಅಸಹಿಷ್ಣು ಮತ್ತು ಸ್ನೇಹಭಾವದ ಕೊರತೆಯಿಂದ ಕೂಡಿರುತ್ತದೆ. ಸನಾತನ ಧರ್ಮವು ಪರಿತ್ಯಾಗ ಮತ್ತು ಶಾಂತಿ- ಸೌಹರ್ದತೆಗಳಿಂದ ಕೂಡಿರುತ್ತವೆ”. ಅವರು ಪ್ರಶ್ನಿಸುತ್ತಾರೆ, “ ಯಾವುದೆ ಅಧಿಕೃತ ವ್ಯಕ್ತಿಯನ್ನು ಪ್ರಶ್ನಿಸುವ ಅವಕಾಶವಿಲ್ಲದ ರೋಮನ್ ಕ್ಯಾಥೊಲಿಕ್ ಸಮಾಜಗಳಲ್ಲಿ ಹಿಟ್ಲರ್, ಮುಸೊಲಿನಿಯಂಥವರು ಜನಿಸಿದ್ದು ಒಂದು ಆಕಸ್ಮಿಕವೇ?” ಎಂದು.

ಹಿಂದೂ ಧರ್ಮದ ಅತ್ಯಂತ ಪ್ರಮುಖ ಧನಾತ್ಮಕ ಅಂಶ- ಅದರ ವೈಶಾಲ್ಯತೆ. ಅದು, ತನಗೆ ಸೇರದ ಇತರರನ್ನು ದ್ರೋಹಿಗಳೆಂದು ಬಗೆಯುವುದಿಲ್ಲ. ಕ್ರೌರ್ಯದಿಂದ,ಬಲವಂತದಿಂದ ಇತರ ಮತಗಳ ಜನರನ್ನು ತನ್ನ ವ್ಯಾಪ್ತಿಗೆ ಕರೆತಂದು, ವೈವಿಧ್ಯತೆಯನ್ನು ನಾಶ ಮಾಡಿ, ಯಾಂತ್ರೀಕೃತ ತನ್ನನ್ನು ಅನುಸರಿಸುವ ಬಣವನ್ನು ಸೃಷ್ಟಿಸುವುದು ಅದಕ್ಕೆ ಬೇಕಿಲ್ಲ. ಇತಿಹಾಸದ ಯಾವ ಹಂತದಲ್ಲಿಯೂ ಹಿಂದೂಗಳು ಬಲಾತ್ಕಾರದ ಮತಾಂತರ ನಡೆಸಿದ್ದನ್ನು ನೀವು ನೋಡಲಾರಿರಿ.

ಹಿಂದೂ ಧರ್ಮ ಎಂದಿಗೂ ನಮ್ಮ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವುದಿಲ್ಲ. ಬಹುಷಃ ಅದಕ್ಕೆ ನಮ್ಮ ಧರ್ಮದಲ್ಲೇ ಅತಿ ಹೆಚ್ಚು ಬುದ್ದಿ ಜೀವಿ(?) ಗಳಿರುವುದು ಅನ್ನಿಸುತ್ತೆ. ಹಿಂದೂ ಧರ್ಮದ ಕೆಲವು ಆಚರಣೆಗಳು ಕೆಲವರಿಗೆ 'ಮೂಢ ನಂಬಿಕೆ' ಅನ್ನಿಸುತ್ತದೆ, ಆದರೆ ಈ ಧರ್ಮದಲ್ಲಿ ಎಲ್ಲವೂ ಸಲ್ಲುತ್ತದೆ.ಇಲ್ಲಿ ದೇವರಿಲ್ಲ ಅಂತ ಹೇಳಿದರು ನಡೆಯುತ್ತೆ, ದೇವರಿದ್ದಾನೆ ನಾನು ಅವನೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿದರು ನಡೆಯುತ್ತೆ. ಯಾರು ನಿಮಗೆ ಶಿಕ್ಷೆ/ಫತ್ವಾ ವಿದಿಸುವುದಿಲ್ಲ.

ಆದರೆ ಜಗತ್ತಿನಲ್ಲೇ ಪ್ರಗತಿ ಪರ ಧರ್ಮ ಎಂದು ಹೇಳಿಕೊಳ್ಳುವವರು, 'ಚರ್ಚಿನ ಕೆಲವು ನಂಬಿಕೆಗಳು' ತಪ್ಪು ಅಂತ ಹೇಳಿದ ಮಹಾನ್ ವಿಜ್ಞಾನಿಗಳಿಗೆ ಕೊಟ್ಟ ಹಿಂಸೆ ಅಷ್ಟಿಷ್ಟಲ್ಲ. ವೈಜ್ಞಾನಿಕ ವಿಚಾರಗಳಿಗೆ ಹಾಗೂ ಸಂಶೋಧನೆಗಳಿಗೆ ಹಿಂದೂ ಧರ್ಮ ಎಂದಿಗೂ ಅಡ್ಡಿಯುಂಟು ಮಾಡಿಲ್ಲ.ಜೆರುಸಲೆಂ ಎಂಬ ಪವಿತ್ರ ಭೂಮಿಗಾಗಿ 'ಕ್ರುಸೇಡ್ - ಜಿಹಾದ್' ಅನ್ನು ನಡೆಸಿ ಸಾವಿರಾರು ಸಾವು - ನೋವುಗಳಿಗೆ ಕಾರಣವಾಗಿದ್ದು ಹಿಂದೂ ಧರ್ಮವಲ್ಲ.ಈ ಜಗತ್ತಿನಲ್ಲಿ ಮುಸಲ್ಮಾನರಲ್ಲದವರೆಲ್ಲರು ಕಾಫಿರರು,ಅವರಿಗೆ ಇರುವುದು ಎರಡೇ ದಾರಿ, ಒಂದು ಅಲ್ಲಾನನ್ನು ನಂಬಬೇಕು, ಇಲ್ಲವೇ ಅವರಿಗೆ ಈ ಜಗತ್ತಿನಲ್ಲಿ ಬದುಕುವ ಅರ್ಹತೆಯೇ ಇಲ್ಲ ಅಂತ ದ್ವೇಷದ ಬಿಜ ಬಿತ್ತಿದ್ದು ಖಂಡಿತ ಹಿಂದೂ ಧರ್ಮ ಅಲ್ಲ.

ದಕ್ಷಿಣ ಆಫ್ರಿಕಾದ ನಾಯಕ ಡೆಸ್ಮಂಡ್ ಟುಟು ಅವರು ಹೇಳಿದ್ದರು "ನಮ್ಮ ಭೂಮಿಗೆ ಮಿಶನರಿಗಳು ಬಂದಾಗ ಅವರ ಕೈಯಲ್ಲಿ ಬೈಬಲ್ ಇತ್ತು, ನಮ್ಮ ಕೈಯಲ್ಲಿ ಭೂಮಿ ಇತ್ತು. ಆದರೆ ನಾವು ಪ್ರಾರ್ಥನೆಗೆಂದು ಮುಚ್ಚಿದ್ದ ಕಣ್ಣು ತೆರೆಯುವಷ್ಟರಲ್ಲಿ ನಮ್ಮ ಕೈಯಲ್ಲಿ ಬೈಬಲ್ ಇತ್ತು, ನಮ್ಮ ಭೂಮಿ ಅವರ ಕೈಯಲ್ಲಿ ಇತ್ತು" ಹೀಗೆ ಅನ್ಯ ಧರ್ಮಿಯರ ಪರಿಧಿಯೊಳಗೆ ಹಿಂದೂ ಧರ್ಮವೆಂದು ಅತಿಕ್ರಮಣ ಮಾಡಿಲ್ಲ. ಶತ್ರು ಕ್ಷಮೆ ಕೋರಿ ಬಂದಾಗ ಅವನಿಗೆ ಕ್ಷಮೆ ನೀಡಿದ ಧರ್ಮ ನಮ್ಮದು. ಅಂದು ಪೃಥ್ವಿರಾಜ್ ಚೌಹಣ ಮಹಮ್ಮದ್ ಘೋರಿಯನ್ನು ಕ್ಷಮಿಸಿ ಜೀವದಾನ ಮಾಡಿದ ತಪ್ಪಿಗೆ ತನ್ನ ಜೀವವನ್ನೇ ಕಳೆದುಕೊಂಡ. ಅದೇ ಘೋರಿ ಮುಂದೆ ಭಾರತದಲ್ಲಿ ಮಾಡಿದ ಅನಾಹುತಗಳ ಕುರುವು ಇನ್ನು ನಮ್ಮ ಕಣ್ಣ್ ಮುಂದಿದೆ.

"ದೇವರೊಂದೇ ನಾಮ ಹಲವು" ಎಂದು ನಮ್ಮ ಧರ್ಮದಲ್ಲಿ ಹೇಳುತ್ತಾರೆಯೇ ಹೊರತು, ವಿಗ್ರಹ ಆರಾಧನೆ ತಪ್ಪು ಎಂದೋ,ಇಲ್ಲ ಬೇರೆಯವರ ಆಚರಣೆ ಅಥವಾ ಅವರ ನಂಬಿಕೆ ಬಗ್ಗೆ ಹಿಂದೂ ಧರ್ಮ ಯಾವತ್ತು ಪ್ರಶ್ನೆ ಮಾಡೋಲ್ಲ. ಧರ್ಮವನ್ನು ವ್ಯಾಪರದಂತೆ ಮಾಡಿಕೊಂಡು ಮತಾಂತರವೆಂಬ ವ್ಯಾಪಾರ ಮಾಡಿ ತನ್ನ ಧರ್ಮಿಯರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ದುರಾಸೆಯು ಹಿಂದೂ ಧರ್ಮಕ್ಕಿಲ್ಲ.

ನಿಜ ನಮ್ಮ ಧರ್ಮದಲ್ಲೂ 'ಅಸ್ಪೃಶ್ಯತೆ, ಜಾತಿ ಪದ್ಧತಿ' ಯೆಂಬ ಅನಿಷ್ಟ ಇತ್ತು (ಈಗಲೂ ಕೆಲ ಕಡೆ ಇರಬಹುದು),ಅದನ್ನೇ ಹಿಡಿದು ಹಿಂದೂ ಧರ್ಮವನ್ನು ದೂಷಿಸುವ ಜನರಿಗೆ ಅನ್ಯ ಧರ್ಮದಲ್ಲಿ ಆ ರೀತಿ ಪದ್ಧತಿ ಇದೆ ಅನ್ನವುದು ಕಣ್ಣಿಗೆ ಕಾಣುವುದಿಲ್ಲ.

ನಮ್ಮ ಮನೆಯ ವಾಸ್ತು ಸರಿಯಾಗಿಲ್ಲ ಅಂದ್ರೆ ಅದನ್ನ ದುರಸ್ತಿ ಮಾಡಬಹುದು, ಇಲ್ಲ ಬೀಳಿಸಿ ಕಟ್ಟಬಹುದು, ಅದು ಬಿಟ್ಟು 'ಮನೆ ಬಿಟ್ಟು ಓಡಿ ಹೋಗುವುದು' ಎಷ್ಟು ಸರಿ??
ಈಗ ಆಗುತ್ತಿರುವುದು ಅದೇ, ಮನೆ ಬಿಟ್ಟು ಓಡುತ್ತಿರುವವರಿಗೆ, ಬುದ್ದಿ ಜೀವಿಗಳು ಹಾಗು ಜಾತ್ಯತಿತವಾದಿಗಳು 'ಓಡಿ ಓಡಿ ತಿರುಗಿ ನೋಡದ ಹಾಗೆ ಓಡಿ ನಿಮ್ಮ ಸ್ವಂತ ಮನೆ ಸರಿ ಮಾಡ್ಕೋಬೇಡಿ' ಅಂತ ಹೇಳ್ತಾ ಇದ್ದಾರೆ. ಬಾಡಿಗೆ ಮನೆಯಲ್ಲಿರುವವರ ಪಾಡು ಇರುವವರಿಗೆ ಗೊತ್ತು! ಪಾಪ Sad

ಮೊದಲೇ ಹೇಳಿದ ಹಾಗೆ ಹಿಂದೂ ಧರ್ಮ ಒಂದು ಸಮುದ್ರದಂತೆ ನನ್ನ ಬೊಗಸೆಗೆ ಸಿಕ್ಕಷ್ಟನ್ನು ಮಾತ್ರ ನಾನು ಹೇಳಿದ್ದೇನೆ. ತಿಳಿದವರು ತಮ್ಮ ಅಭಿಪ್ರಾಯವನ್ನು ಸೇರಿಸಿದರೆ ನಮ್ಮ ಧರ್ಮದ ಬಗ್ಗೆ ಇನ್ನು ಹೆಚ್ಚು ತಿಳಿಯಬಹುದು, ಅಲ್ಲವೇ?

No comments:

Post a Comment